

ಆಲೂರು: ಕಾರ್ತಿಕ ಮಾಸದಲ್ಲಿ ದೀಪಾರಾಧನೆಗೆ ವಿಶೇಷ ಮಹತ್ವವಿದೆ. ಭಗವಂತನ ಪ್ರೀತ್ಯರ್ಥವಾಗಿರುವ ಕಾರ್ತಿಕ ಮಾಸದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ದೀಪ ಬೆಳಗಬೇಕು. ಕಾರ್ತಿಕ ಮಾಸದಲ್ಲಿ ದೀಪಾರಾಧನೆಯಿಂದ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ.ಷ.ಬ್ರ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿ ಶ್ರೀಮದ್ ರಂಭಾಪುರಿ ಬಾಳೆಹೊನ್ನೂರು ಶಾಖ ಮಠವಾದ ಕಾರ್ಜುವಳ್ಳಿ ಹಿರೇಮಠದಲ್ಲಿ ಕಾರ್ತಿಕ ದೀಪೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಕಾರ್ತಿಕ ಮಾಸದ ಹುಣ್ಣಿಮೆಯ ದಿನ ದೀಪಾರಾಧನೆ ಅತ್ಯಂತ ಶ್ರೇಷ್ಠ. ಹೀಗಾಗಿ ಪ್ರಸಿದ್ಧ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಕಾರ್ತಿಕ ಮಾಸದ ಹಿನ್ನೆಲೆಯನ್ನು ನೋಡುವುದಾದರೆ ಈ ಮಾಸದ ಹೆಸರು ಕಾರ್ತಿಕ ಎಂಬ ಪದದಿಂದ ಬರಲಾಗಿದೆ ಎಂದು ಹೇಳಲಾಗುತ್ತದೆ ಎನ್ನುವುದು ಒಂದು ನಕ್ಷತ್ರದ ಹೆಸರು ಈ ತಿಂಗಳಲ್ಲಿ ಕಾರ್ತಿಕ ಎನ್ನುವ ನಕ್ಷತ್ರ ಚಂದ್ರನಿಗೆ ಬಹಳ ಸಮೀಪ ಬರುತ್ತದೆ. ಇದರ ಪರಿಣಾಮ ಈ ಮಾಸದಲ್ಲಿ ಹುಣ್ಣಿಮೆಯ ಚಂದ್ರ ಕಾರ್ತಿಕ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಹೀಗಾಗಿ ಕಾರ್ತಿಕ ಎನ್ನುವ ನಕ್ಷತ್ರದ ಹೆಸರನ್ನು ಈ ಮಾಸಕ್ಕೆ ಇಡಲಾಗಿದೆ. ಪ್ರತಿ ಮಾಸಕ್ಕೆ ಒಬ್ಬ ನಾಮಕ ದೇವರು ಇರುತ್ತಾನೆಂದು, ಆ ದೇವರ ಆರಾಧನೆಯಿಂದ ಅತ್ಯಂತ ಶುಭವಾಗುತ್ತದೆ.ಕಾರ್ತಿಕ ಮಾಸದ ಅಧಿಪತಿ ಪರಮೇಶ್ವರ ಈ ಮಾಸದಲ್ಲಿ ಶಿವಾಲಯಗಳಿಗೆ ಭೇಟಿ ನೀಡುವುದು ಪುಣ್ಯಪ್ರದ. ಈ ಮಾಸದಲ್ಲಿ ಮಠ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ವೀರಶೈವ ಸಮಾಜದ ಕಾರ್ಯದರ್ಶಿ ಶಿವಮೂರ್ತಿ ಮುರುಡೂರು, ಮುಖಂಡರಾದ ಮಲ್ಲೇಶ್, ಕೆ.ಎಂ ರಾಜಶೇಖರ್, ಅಂಗನವಾಡಿ ಶಿಕ್ಷಕಿ ಪೂರ್ಣಿಮಾ ಹಾಗೂ ವಿವಿಧ ಗ್ರಾಮಗಳಲ್ಲಿನ ಭಕ್ತಾದಿಗಳು ಹಾಜರಿದ್ದರು.