

ಬೆಂಗಳೂರು: ಕಾರು ತಾಗಿದ ವಿಚಾರಕ್ಕೆ ಜಗಳವಾಗಿ ಚಾಲಕನು ಮತ್ತೊಂದು ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕವಾಗಿ ಮಚ್ಚು ಝಳಪಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ.
ಓಕಳಿಪುರದ ರಾಜೀವ್‌ಗಾಂಧಿ ಅಷ್ಟಪಥ ಕಾರಿಡಾರ್‌ನಲ್ಲಿ ಸೋಮವಾರ ಮಧ್ಯಾಹ್ನ
ಈ ಘಟನೆ ನಡೆದಿದೆ. ಹಲ್ಲೆಗೊಳಗಾಗಿರುವ ಚಾಲಕ ಕುಮಾರ್ ಅವರು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಚಾಲಕ ಪರಾರಿಯಾಗಿದ್ದಾನೆ.
ದೂರುದಾರ ಕುಮಾರ್ ಅವರು ಪ್ರಯಾಣಿಕರನ್ನು ಕೂರಿಸಿಕೊಂಡು ಓಕಳಿಪುರ ಮಾರ್ಗವಾಗಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಇನ್ನೋವಾ ಕಾರು, ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಆಗ ಕುಮಾರ್ ವಾಹನ ನಿಲ್ಲಿಸಿದ್ದಾರೆ. ನಂತರ ಇನ್ನೋವಾ ಕಾರಿನ ಚಾಲಕ ಕೆಳಗಿಳಿದು ಬಂದು ಕುಮಾರ್ ಜತೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದಾನೆ. ಅಲ್ಲದೆ, ಕುಮಾರ್‌ರ ಕುತ್ತಿಗೆಗೆ ಮಚ್ಚು ಹಿಡಿದು ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವೇಳೆ ಕುಮಾರ್ ನೆರವಿಗೆ ಧಾವಿಸಿದ ಸಾರ್ವಜನಿಕರು, ಇನ್ನೋವಾ ಕಾರಿನ ಚಾಲಕನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆಗ ಆತ ವಾಹನ ಸಮೇತ ಪರಾರಿಯಾಗಲು ಯತ್ನಿಸಿದ್ದಾನೆ. ನಂತರ ಸಾರ್ವಜನಿಕರು ಆತನ ಕಾರನ್ನು ಅಡ್ಡಗಟ್ಟಿ ಗಾಜಿನ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಇದರಿಂದ ಭಯಬಿದ್ದ ಇನ್ನೋವಾ ಕಾರಿನ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಹಲ್ಲೆಗೊಳಗಾಗಿರುವ ಕುಮಾರ್ ಅವರು ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನೋವಾ ಕಾರನ್ನು ಜಪ್ತಿ ಮಾಡಿದ್ದು, ಚಾಲಕನ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.