ಕಾರು ನಾಲೆಗೆ ಉರುಳಿ ಬಿದ್ದು ಇಬ್ಬರ ಸಾವು

3KWR1
Published on

ಕಾರವಾರ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮಂಗಳವಾರ ಬೆಳಗಿನ ಜಾವ ನಗರದ ಕೋಣೆ ನಾಲೆಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.

ಚಿಕ್ಕಮಗಳೂರು ನಗರದ ರಾಮನಹಳ್ಳಿಯ ರಾಕೇಶ ಸಿ.ಆರ್.(28), ಕಿರಣ ಡಿ.(28) ಮೃತ ಪಟ್ಟವರು. ಹಿಂಬದಿ ಸೀಟಿನಲ್ಲಿದ್ದ ಪ್ರಜ್ವಲ ಸಿ.ವಿ(28) ಮತ್ತು ಸುನೀಲ ಕೆ.ಆರ್(28) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರವಾರ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೋವಾಕ್ಕೆ ಹೊರಟಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಲಂಡನ್ ಬ್ರಿಜ್ ಬಳಿ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕೋಣೆ ನಾಲಾಕ್ಕೆ ಸುಮಾರು 20 ಅಡಿ ಆಳಕ್ಕೆ ಬಿದ್ದಿದೆ. ಕಾರಿನ ಭಾಗಶಃ ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಕ್ಷಣೆ ಮಾಡಿದ ರೈಲ್ವೆ ಪೊಲೀಸರು
ಬೆಳಗಿನಜಾವ ಕಾರು ಅಪಘಾತವಾಗಿ ಅದರಲ್ಲಿದ್ದ ಪ್ರಯಾಣಿಕರು ನರಳುತ್ತ ಬಿದ್ದಿದ್ದರು. ಆ ಮಾರ್ಗದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ರೈಲ್ವೆ ರಕ್ಷಣಾ ದಳದ ಎಸ್​ಐ ಸಿಟಿ ದಿಲೀಪ ಗುನಗಿ ಹಾಗೂ ಚಾಲಕ ಸಂತೋಷ ನಾಯ್ಕ ಇದನ್ನು ಗಮನಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಯೋಗೇಂದ್ರ ಸಿಂಗ್ ಮಾಕ್ವಾನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ರೈಲ್ವೆ ಪೊಲೀಸರು ಸೇರಿ ಎಲ್ಲರನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ಸೇರಿಸಿದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net