

ಎಚ್.ಡಿ.ಕೋಟೆ: ವಿಶ್ವಕರ್ಮ ಸಮುದಾಯಕ್ಕೆ ವಿಶೇಷ ನೈಪುಣ್ಯತೆ ಇದೆ. ಆದರೆ ಸಮುದಾಯಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ತಾಲೂಕು ವಿಶ್ವಕರ್ಮ ಸಮಾಜದಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಯಕದಲ್ಲಿ ನಿರತರಾದ ಸಮುದಾಯಗಳು ಶಿಕ್ಷಣದಿಂದ ವಂಚಿತರಾದವು. ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯರನ್ನ ಬಿಟ್ಟರೆ ಬೇರೆ ವರ್ಗದವರಿಗೆ ಕಲಿಯುವ ಅವಕಾಶ ಸಿಗಲಿಲ್ಲ ಎಂದು ಹೇಳಿದರು.
ವಿದ್ಯೆ ಯಾರಪ್ಪನ ಮನೆಯ ಸ್ವತ್ತಲ್ಲ. ನಮ್ಮ ಅಪ್ಪ, ಅಮ್ಮ ವಿದ್ಯಾವಂತರಲ್ಲ. ನನಗೆ ಶಿಕ್ಷಣ ಸಿಕ್ಕಿದ್ದರಿಂದ ಮುಖ್ಯಮಂತ್ರಿ ಆದೆ. ಸಂವಿಧಾನ ಇರದೆ ಇದ್ದರೆ ನರೇಂದ್ರ ಮೋದಿ ಪ್ರಧಾನಿ ಆಗಲು ಸಾಧ್ಯವಿರಲಿಲ್ಲ. ಆದರೆ ಈಗ ಕೆಲವರು ಸಂವಿದಾನವೇ ಬೇಡ ಎನ್ನುವಂತೆ ಕುಟಿಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಕೆ.ಪಿ.ನಂಜುಂಡಿ ಹಾಗೂ ರಘು ಆಚಾರ್ ಸಮಾಜದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ನ್ಯಾಯ ದೊರಕಿಸಿ ಕೊಡಬೇಕು ಎಂದರು.
ಮೇಲ್ಜಾತಿಯವರು ಮೀಸಲಾತಿಗೆ ಅರ್ಹರಲ್ಲ. ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ಸಿಗಬೇಕು. ಮೇಲ್ಜಾತಿಯವರಿಗೆ ಶೇ. 10 ಮೀಸಲಾತಿ ಕೊಟ್ಟಿರುವುದು ಸರಿಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ವಿಶ್ವಕರ್ಮ ಸಮುದಾಯದ ರಾಜ್ಯ ಅಧ್ಯಕ್ಷ ಕೆ.ಪಿ.ನಂಜುಂಡಿ ಮಾತನಾಡಿ, ಪಂಚ ಕಸಬು ಮಾಡುವ ಏಕೈಕ ಸಮಾಜ ವಿಶ್ವಕರ್ಮ. ಸಮುದಾಯದವರಿಗೆ ರಾಜಕೀಯ ಗೊತ್ತಿಲ್ಲ. ಸಂವಿಧಾನದಲ್ಲಿ ಏನಿದೆ ಎಂದು ಓದಿಕೊಂಡಿಲ್ಲ. ಪ್ರಜಾಪ್ರಭುತ್ವದ ಅವಕಾಶವನ್ನು ಬಳಕೆ ಮಾಡಿಕೊಳ್ಳದೆ ಇದ್ದರೆ ಅನ್ಯಾಯಕ್ಕೆ ಒಳಪಡುತ್ತೇವೆ. ವಿಶ್ವಕರ್ಮ ಸಮುದಾಯದಲ್ಲಿ 41 ಪಂಗಡಗಳಿವೆ. ನಮ್ಮದು ಬುಡಕಟ್ಟು ಸಂಸ್ಕೃತಿ ಆಗಿದ್ದು, ಕುಲಶಾಸ್ತ್ರ ಅಧ್ಯಯನ ಆಗುತ್ತಿದೆ. ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಅದಕ್ಕಾಗಿ ಸಂಘಟಿತರಾಗಿ ಹೋರಾಟ ಮಾಡೋಣ ಎಂದು ತಿಳಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ನಗರೊತ್ಥಾನ ಯೋಜನೆಯಡಿ 14 ಲಕ್ಷ ರೂ. ನೀಡಲಾಗಿದೆ. ಸಮುದಾಯ ವಾಸ ಮಾಡುವ ಗ್ರಾಮಗಳ ಅಭಿವೃದ್ಧಿಗೆ 29 ಲಕ್ಷ ರೂ. ಹಾಗೂ ರಸ್ತೆ ಅಭಿವೃದ್ಧಿಗೆ 2.5 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ವಿಶ್ವಕರ್ಮ ಸಮುದಾಯದ ಶ್ರೀ ಅನಂತ ವಿಭೂಷಿತ ಶಿವಸುಜ್ಞಾತತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕರಾದ ಜಿ.ಟಿ.ದೇವೇಗೌಡ, ಡಾ.ತಿಮ್ಮಯ್ಯ, ಮಾಜಿ ಶಾಸಕರಾದ ರಘು ಆಚಾರ್, ಬೀಚನಹಳ್ಳಿ ಚಿಕ್ಕಣ್ಣ, ಪುರಸಭಾ ಅಧ್ಯಕ್ಷೆ ಅನಿತಾ ನಿಂಗನಾಯಕ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ರಾಜು ವಿಶ್ವಕರ್ಮ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಡಗಲಪುರ ವೆಂಕಟೇಶ್, ಮಹಾಸಭಾ ಯುವ ಘಟಕದ ಅಧ್ಯಕ್ಷ ನಾಗೇಶ್, ಜೆಡಿಎಸ್‌ಮುಖಂಡ ಜಯಪ್ರಕಾಶ್, ಮುಖಂಡರಾದ ಎಂ.ಸಿ.ದೊಡ್ಡನಾಯಕ, ಗಣೇಶ ಆಚಾರ್, ಸಿದ್ದಪ್ಪಾಜಿ, ಮೂರ್ತಾಚಾರ್, ಬೆಳಗನಹಳ್ಳಿ ವೆಂಕಟೇಶ್, ದಾಸಾಚಾರಿ, ರಮೇಶ್, ಸೋಮಚಾರ್, ಡಾ.ಕೃಷ್ಣಸ್ವಾಮಿ, ನಂದಕುಮಾರ್, ರಾಜು ಎಲ್ಐಸಿ, ಲಿಂಗಾಚಾರ್, ನಾಗರಾಜಪ್ಪ, ಪುಟ್ಟಾಚಾರಿ, ಗೋಪಾಲಾಚಾರ್, ರಾಜಾಚಾರಿ ಇದ್ದರು.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದ ಆವರಣದಿಂದ ಬೆಳ್ಳಿ ರಥದಲ್ಲಿ ವಿಶ್ವಕರ್ಮ ಭಾವಚಿತ್ರ ಇರಿಸಿ, ನಾದ ಸ್ವರ, ವೀರಗಾಸೆ, ನಗಾರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು.