

ಕೋಲಾರ : ಅಬಲರಿಗೆ ನೆರವಾಗುವ ಸಂಕಲ್ಪದೊಂದಿಗೆ ‘ಕಾಯಕ’ ಯೋಜನೆಯನ್ನು ಜಾರಿಗೆ ತಂದಿದ್ದು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿ ಕುಟುಂಬಕ್ಕೂ ಇದರಿಂದ ಅನುಕೂಲವಾಗಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಬುಧವಾರ ಸ್ತ್ರೀ-ಶಕ್ತಿ ಸಂಘಗಳ ಸದಸ್ಯರಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿ, ಕಾಯಕದ ಮೂಲಕ ಉದ್ಯೋಗ ಕ್ರಾಂತಿಗೆ ಡಿಸಿಸಿ ಬ್ಯಾಂಕ್ ಗಮನ ಹರಿಸಿದೆ, ಯಾರಿಗೂ ಅಧಿಕಾರ ಶಾಶ್ವತವಲ್ಲ, ಆದರೆ ಅವಕಾಶ ಸಿಕ್ಕಾಗ ಬಡವರ ಪರ ಕೆಲಸ ಮಾಡಿದರೆ ಜನ್ಮ ಸಾರ್ಥಕವಾಗುತ್ತದೆ ಎಂದರು.
ಕಾಯಕದಡಿ ಉದ್ಯೋಗ ಕ್ರಾಂತಿ ಕಾಣಬಹುದು. ಸಾಲಕ್ಕಾಗಿ ದಲ್ಲಾಳಿಗಳ ಅವಶ್ಯಕತೆ ಇಲ್ಲ, ಜಾತಿ, ಪಕ್ಷ ನೋಡದೆ ಅರ್ಹರಿಗೆ ಸಾಲ ನೀಡಲಾಗುವುದು, ಬಡ ಮಹಿಳೆಯರು ಇದರ ಪ್ರಯೋಜನ ಪಡೆದು ಕೂಲಿಕಾರರು ಆಗುವ ಬದಲು ಮಾಲೀಕರಾಗಬಹುದು ಎಂದರು.
ಬ್ಯಾಂಕ್ ವಿರುದ್ಧ ಲಘುವಾಗಿ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಬಡವರಿಗೆ ಸಹಾಯ ಮಾಡಲು ಗಮನ ಹರಿಸುತ್ತೇನೆ, ನಮ್ಮ ಆಡಳಿತ ಮಂಡಳಿಯ ಪ್ರಾಮಾಣಿಕ ಸೇವೆ ಟೀಕಿಸುವವರಿಗೆ ಉತ್ತರವಾಗಲಿದೆ ಎಂದರು.
ಡಿಸಿಸಿ ಬ್ಯಾಂಕ್ ಎಂದರೆ ಸಾಲಕ್ಕೆ ಸಿಮೀತ ಎಂಬ ತಪ್ಪು ಕಲ್ಪನೆ ಇದ್ದರೆ ತೆಗೆದು ಹಾಕಿ, ನಿಮ್ಮ ಮನಸ್ಥಿತಿ ಬದಲಿಸಿಕೊಳ್ಳಿ, ನಿಮಗೆ ಶೂನ್ಯಬಡ್ಡಿ ಸಾಲಸೌಲಭ್ಯ ಒದಗಿಸಿ ನಿಮ್ಮನ್ನು ಗೌರವದಿಂದ ನಡೆಸಿಕೊಳ್ಳುವ ಡಿಸಿಸಿ ಬ್ಯಾಂಕಿನಲ್ಲೇ ಉಳಿತಾಯ ಮಾಡಿ, ವಹಿವಾಟು ನಡೆಸಿ ಎಂದರು.
ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಬ್ಯಾಂಕಿನಿಂದ ಕಿಸಾನ್ ಶ್ರೀಲಕ್ಷ್ಮೀ ಠೇವಣಿಯ ಬಾಂಡ್ ಯೋಜನೆ ಜಾರಿಗೆ ತಂದಿದ್ದು ಎಲ್ಲರೂ ಇದರ ಪ್ರಯೋಜನೆ ಪಡೆಯಬೇಕು ಎಂದರು.
ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಬ್ಯಾಂಕಿನಿಂದ ಕಳೆದ 7 ವರ್ಷಗಳಲ್ಲಿ 1500 ಕೋಟಿ ರೂ.ಗೂ ಅಧಿಕ ಸಾಲ ಸೌಲಭ್ಯ ನೀಡಿದ್ದೇವೆ. ಯಾವುದೇ ಅಡಮಾನ ಇಲ್ಲದೆ 5 ಲಕ್ಷದ ತನಕ ಹಾಗೂ ಅದಕ್ಕಿಂತ ಹೆಚ್ಚಿನ ಸಾಲಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಪಡೆದುಕೊಂಡಿರುವ ಸಾಲವನ್ನು ಆದಾಯೋತ್ಪನ್ನ ಚಟುವಟಿಕೆಗಳಿಗೆ ಬಳಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಬ್ಯಾಂಕ್ ವ್ಯವಸ್ಥಾಪಕ ಅಂಬರೀಶ್, ಮೇಲ್ವಿಚಾರಕ ಅಮೀನಾ ಉಪಸ್ಥಿತರಿದ್ದರು.