ಕಾಯಂ ಶಿಕ್ಷಕರಿಗಾಗಿ 16 ಕಿಮೀ ಮೆರವಣಿಗೆ

13hos1p school strike
ಹೊಸನಗರದ ದುಬ್ಬಾರತಟ್ಟಿ ಶಾಲೆ ವಿದ್ಯಾರ್ಥಿಗಳು ಪಾಲಕರ ಜತೆ ಸೇರಿ ಕಾಯಂ ಶಿಕ್ಷಕರಿಗಾಗಿ ಪ್ರತಿಭಟನೆ ನಡೆಸಿದರು. ಕರುಣಾಕರ ಶೆಟ್ಟಿ, ಪಲ್ಲವಿ, ಜಾನತ್, ನಾಗೇಶ್, ಇದಾಯತ್, ಗಫರ್, ಗಣೇಶ್, ಮಾರುತಿ, ರಮೇಶ್, ನಾಗೇಶ, ರಾಘವೇಂದ್ರ, ಕಿಶೋರ ನಗರ, ಸಲೀಂ ಇತರರಿದ್ದರು.
Published on

ಹೊಸನಗರ: ಸರ್ಕಾರಿ ಶಾಲೆಯೊಂದರಲ್ಲಿ ಕಾಯಂ ಶಿಕ್ಷಕರಿಲ್ಲದಿರುವುದನ್ನು ಖಂಡಿಸಿ ಪಾಲಕರು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದುಬಾರತಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಯ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಪಾಲಕರು ಆರೋಪಿಸಿದರು. ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 15 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಶಿಕ್ಷಕರಿಲ್ಲದೆ ಸೂಕ್ತ ಶಿಕ್ಷಣ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಬಿಇಒ ಕಚೇರಿಗೆ ತೆರಳಿ ಮನವಿ ಮಾಡುತ್ತೇವೆ. ಇಂದೇ ಕಾಯಂ ಶಿಕ್ಷಕರನ್ನು ನೀಡದಿದ್ದಲ್ಲಿ ಮಕ್ಕಳನ್ನು ಅಲ್ಲೇ ಬಿಡುತ್ತೇವೆ. ಮಕ್ಕಳ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ನಂತರ ದುಬಾರತಟ್ಟಿ ಮಾರ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ 16 ಕಿಮೀ ದೂರದ ಹೊಸನಗರ ತಾಲೂಕು ಕಚೇರಿಗೆ ತೆರಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಪ್ರಮುಖರಾದ ನಾಗೇಶ್, ಇದಾಯತ್, ಗಫರ್, ಗಣೇಶ್, ಮಾರುತಿ, ರಮೇಶ್, ನಾಗೇಶ, ರಾಘವೇಂದ್ರ, ಕಿಶೋರ ನಗರ, ಸಲೀಂ, ಇಜಾದ್, ಜನಾತ್, ಪಲ್ಲವಿ, ಶಶಿಕಲಾ, ಜಯಕ್ಕ, ಆಸ್ಮಾ, ಅಲುಮೇರ ಇತರರಿದ್ದರು.
ಕೂಡಲೆ ಕಾಯಂ ಶಿಕ್ಷಕರನ್ನು ನಿಯೋಜಿಸುವಂತೆ ಒತ್ತಾಯಿಸಿ ತಾಲೂಕು ಕೇಂದ್ರದ ಮಾರಿಗುಡ್ಡದಲ್ಲಿರುವ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಇಲಾಖೆಯ ಅಧಿಕಾರಿಗಳು ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಕೂಡ ವಿದ್ಯಾರ್ಥಿಗಳು ಮತ್ತು ಪಾಲಕರು ಹಿಡಿದ ಪಟ್ಟು ಸಡಿಲಿಸಲಿಲ್ಲ. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ ಕೂಡ ಮಾತುಕತೆ ನಡೆಸಿದರು. ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ದೂರವಾಣಿ ಕರೆ ಮಾಡಿ, ಅಧಿಕಾರಿಗಳಿಗೆ ಸಮಸ್ಯೆ ನೀಗಿಸುವಂತೆ ತಾಕೀತು ಮಾಡಿದರು. ಪ್ರತಿಭಟನೆ ಸಂಜೆ 4 ಗಂಟೆವರೆಗೆ ಮುಂದುವರಿಯಿತು. ಬಳಿಕ ಬಿಇಒ ಕೃಷ್ಣಮೂರ್ತಿ ಸೆ.20ರ ಒಳಗೆ ಶಿಕ್ಷಕರನ್ನು ನಿಯೋಜಿಸುವ ಖಚಿತ ಭರವಸೆ ನೀಡಿ ಪ್ರತಿಭಟಕಾರರ ಮನವೊಲಿಸಿದರು. ಬಳಿಕ ಮಾತನಾಡಿದ ಕರುಣಾಕರ ಶೆಟ್ಟಿ, ಒಂದು ವೇಳೆ ಮಾತು ತಪ್ಪಿದರೆ ಮತ್ತೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net