

ಹೊಸನಗರ: ತಾಲೂಕಿನ ನಗರ ಸರ್ಕಾರಿ ಸಂಯುಕ್ತ ಆಸ್ಪತ್ರೆಯಲ್ಲಿ ಕಾಯಂ ವೈದ್ಯರ ಕೊರತೆ ನೀಗಿಸುವಂತೆ ಆಗ್ರಹಿಸಿ ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಮಂಗಳವಾರ ಆಸ್ಪತ್ರೆ ಕಟ್ಟಡ ಏರಿ ಪ್ರತಿಭಟನೆ ಮಾಡಿದರು. ಕಾಯಂ ವೈದ್ಯರನ್ನು ನೇಮಿಸುವವರೆಗೆ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದರು.
ವೈದ್ಯರ ನಿಯೋಜನೆಗೆ ಒತ್ತಾಯಿಸಿ ಅಧ್ಯಕ್ಷರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತರಲಾಗಿದೆ. ಸಾರ್ವಜನಿಕ ಅಗತ್ಯವಾದ ಪಾರ್ಕಿಂಗ್ ವ್ಯವಸ್ಥೆ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಯನ್ನು ಪೂರಕವಾಗಿ ಅಳವಡಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರವಿ ಶಾಸ್ತ್ರಿ ಆರೋಪಿಸಿದರು.
ಆಕ್ರೋಶ: ಈ ಹಿಂದೆ ಖುದ್ದು ಗೃಹ ಸಚಿವರೇ ವೈದ್ಯರ ನಿಯೋಜನೆಗೆ ಸೂಚಿಸಿದ್ದರೂ ಕ್ರಮ ಕೈಗೊಂಡಿಲ್ಲ. ನಿಮ್ಮನ್ನು ಇಲ್ಲಿಗೆ ಕರೆಸಲು ನಾವು ಪ್ರತಿಭಟನೆ ನಡೆಸಿ ಮಾಧ್ಯಮಗಳಲ್ಲಿ ಸುದ್ದಿಯಾಗಬೇಕಾ ಎಂದು ಟಿಎಚ್‌ಒ ಡಾ. ಸುರೇಶ್ ವಿರುದ್ಧ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಿತಿನ್ ನಗರ, ಪ್ರಮುಖ ರಾಜೇಶ್ ಹಿರೀಮನೆ ಆಕ್ರೋಶ ವ್ಯಕ್ಯಪಡಿಸಿದರು.
ವೈದ್ಯರ ನಿಯೋಜಿಸಿದ ಟಿಎಚ್‌ಒ: ನಗರ ಆಸ್ಪತ್ರೆಗೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್, ಸದರಿ ಆಸ್ಪತ್ರೆಯ ಹಗಲು ಸೇವೆಗೆ ಡಾ. ಲಾವಣ್ಯಾ, ರಾತ್ರಿ ಪಾಳಿಗೆ ಡಾ. ಸುರೇಖಾ ಎಂಬುವರಿಗೆ ಕಾರ್ಯನಿರ್ವಹಿಸಲು ಸೂಚಿಸಿ ಆದೇಶ ಪತ್ರ ನೀಡಿದರು. ಬಳಿಕ ಕರುಣಾಕರ ಶೆಟ್ಟಿ ಪ್ರತಿಭಟನೆ ನಿಲ್ಲಿಸಿ ಕೆಳಗಿಳಿದರು.