

ಹುಣಸೂರು: ಕೇಂದ್ರ ಪುರಸ್ಕೃತ ನರೇಗಾ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆಗಳು (ಪಿಎಂಎವೈ) ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಂಡಿರುವುದರ ಕುರಿತು ಡಾ.ಆರ್.ವೆಂಕಟರವಿ ನೇತೃತ್ವದ ರಾಷ್ಟ್ರೀಯ ಮೇಲ್ವಿಚಾರಣಾ ತಂಡದ (ಎನ್‌ಎಂಎಲ್) ಸದಸ್ಯರು ಪರಿಶೀಲನೆ ನಡೆಸಿದರು.
ತಾಲೂಕಿನ ಕರೀಮುದ್ದನಹಳ್ಳಿ, ಉಯಿಗೊಂಡನಹಳ್ಳಿ, ಕರ್ಣಕುಪ್ಪೆ ಹಾಗೂ ಕಿರಂಗೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ತಂಡ, ನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿತು. ಅಲ್ಲದೆ, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಭೇಟಿ ನೀಡಿದ ಗ್ರಾಮಗಳಲ್ಲಿ ವೈಯಕ್ತಿಕ ಕಾಮಗಾರಿಗಳಾದ ಮೀನು ಸಾಕಣೆ ಹೊಂಡ, ದನದ ಕೊಟ್ಟಿಗೆ, ಎರೆಹುಳು ತೊಟ್ಟಿ, ಬಚ್ಚಲುಗುಂಡಿ, ವಸತಿ ಯೋಜನೆಯಡಿ ಪಡೆದುಕೊಂಡಿರುವ ವಸತಿಗಳ ಫಲಾನುಭವಿಗಳೊಂದಿಗೆ ಯೋಜನೆ ಕುರಿತು ಮಾಹಿತಿ ಪಡೆದರಲ್ಲದೆ, ಸಮುದಾಯ ಕಾಮಗಾರಿಗಳಾದ ಜಾನುವಾರುಗಳಿಗೆ ಹಾಗೂ ರೈತರ ವ್ಯವಸಾಯಕ್ಕೆ ಅನುಕೂಲವಾಗಿರುವಂಥ ಕೆರೆ, ಕಟ್ಟೆ ಕಾಮಗಾರಿ, ಸಿಮೆಂಟ್ ಕಾಂಕ್ರೀಡ್(ಸಿಸಿ) ರಸ್ತೆ, ನಿರ್ಮಾಣ ಹಂತದಲ್ಲಿರುವ ರಾಜೀವ್ ಗಾಂಧಿ ಸೇವಾ ಕೇಂದ್ರ, ಶಾಲಾ ಶೌಚಗೃಹ, ಬೋರ್‌ವೆಲ್ ಮತ್ತು ಚೆಕ್‌ಡ್ಯಾಂ, ಸಂಜೀವಿನಿ ಒಕ್ಕೂಟದವರ ಸಹಾಯಕ್ಕಾಗಿ ನಿರ್ಮಾಣವಾಗಿರುವ ಸಂಜೀವಿನಿ ಘಟಕ ಇನ್ನಿತರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಡಾ.ಆರ್.ವೆಂಕಟರವಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ವೈಯಕ್ತಿಕ ಫಲಾನುಭವಿಗಳನ್ನು ಗುರುತಿಸುವ ಮೂಲಕ ನರೇಗಾ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ರೈತರ ಮನೆಗಳಿಗೆ ತಲುಪಿಸುವ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪುರಸ್ಕೃತ ಯೋಜನೆಗಳು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಗ್ರಾ.ಪಂ.ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿರುವುದು ಯೋಜನೆಯ ಸಫಲತೆಗೆ ಕಾರಣವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ವಿ.ಪಿ.ಕುಲದೀಪ್, ಇಒ ಮನು ಬಿ.ಕೆ, ನರೇಗಾ ಸಹಾಯಕ ನಿರ್ದೇಶಕ ಎಚ್.ಡಿ.ಲೋಕೇಶ್, ವಸತಿ ನೋಡಲ್ ಅಧಿಕಾರಿ ಎಂ.ಎಸ್.ಲೋಕೇಶ್, ತಾಂತ್ರಿಕ ಸಹಾಯಕ ಎಂ ಅರವಿಂದ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು. ಪಿಡಿಒಗಳಾದ ರಾಘವೇಂದ್ರ, ತೇಜೇಂದ್ರ ವರಪ್ರಸಾದ್, ರಾಮಣ್ಣ, ರಾಮದಾಸ್, ಸಹಾಯಕ ತಾಂತ್ರಿಕ ಇಂಜಿನಿಯರ್ ನಟರಾಜ್, ನಂದ ಶ್ರೀನಿವಾಸ್, ಪವಿತ್ರಾ ಇತರರು ಇದ್ದರು.