

ಬಾಳೆಹೊನ್ನೂರು: ಕಾಫಿ ಬೆಳೆಗಾರರು ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಬೇಕು ಎಂದು ಮಾಜಿ ಎಂಎಲ್ಸಿ ಎಸ್.ವಿ.ಮಂಜುನಾಥ್ ಹೇಳಿದರು.
ಸಿಆರ್‌ಎಸ್ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ ಕಾಫಿ ತೋಟಗಳ ನಿರ್ವಹಣೆಯ ಡಿಪ್ಲೊಮಾ ತರಗತಿಗಳಿಗೆ (ಡಿಸಿಇಎಂ) ಬುಧವಾರ ಚಾಲನೆ ನೀಡಿ ಮಾತನಾಡಿ, ಕಾಫಿ ತೋಟಗಳಲ್ಲಿ ಹಲವು ವ್ಯವಸ್ಥಾಪಕರು ಇರುತ್ತಾರೆ. ಆದರೆ ಅವರಿಗೆ ವಿನೂತನ ತಂತ್ರಜ್ಞಾನದೊಂದಿಗೆ ಎಸ್ಟೇಟ್‌ಗಳ ನಿರ್ವಹಣೆ ಮಾಡುವುದು ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಯುವಜನರಿಗೆ ಕಾಫಿ ತೋಟಗಳ ನಿರ್ವಹಣೆಗಾಗಿ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಿರುವುದು ಸಮಯೋಚಿತವಾಗಿದೆ ಎಂದರು.
ಇಂಥ ತರಗತಿಗಳನ್ನು ಯುವಜನರಿಗಾಗಿ ಆರಂಭಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಪ್ರಸ್ತುತ ಆ ಕಾರ್ಯ ನಡೆದಿರುವುದು ಸಂತಸವಾಗಿದೆ. ಕಾಫಿ ಸಂಶೋಧನಾ ಸಂಸ್ಥೆಯು ಉತ್ತಮವಾದ ಹೊಸ ತಳಿಗಳನ್ನು ಸಂಶೋಧನೆ ಮಾಡಿ ಬೆಳೆಗಾರರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಹೊಸ ತಳಿಗಳಿಂದ ಹಲವು ಕಾಫಿ ತೋಟಗಳು ಅಭಿವೃದ್ಧಿ ಸಹ ಹೊಂದಿವೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಾನವ-ಕಾಡು ಪ್ರಾಣಿ ಸಂಘರ್ಷ, ಕೂಲಿ ಕಾರ್ಮಿಕರ, ಅರಣ್ಯ ಕಾಯ್ದೆಯ ಸಮಸ್ಯೆಗಳು ಹಲವು ಇದ್ದು ಇದರಿಂದಾಗಿ ಹಲವು ಕಾಫಿ ತೋಟಗಳು ಸಂಕಷ್ಟದಲ್ಲಿವೆ. ಈ ಬಗ್ಗೆ ಕಾಫಿ ಮಂಡಳಿ ಗಮನಹರಿಸಬೇಕಿದೆ ಎಂದರು.
ಕಾಫಿ ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ. ಸೆಂಥಿಲ್‌ಕುಮಾರ್ ಮಾತನಾಡಿ, ಭಾರತದಲ್ಲಿ ಸಿಸಿಆರ್‌ಐ ಅತಿ ಹಳೆಯ ಸಂಶೋಧನಾ ಸಂಸ್ಥೆಯಾಗಿದ್ದು 100 ವರ್ಷ ಪೂರೈಸಿರುವ ಯಶಸ್ವಿ ಸಂಸ್ಥೆ ಇದು ಎಂಬುದು ಹೆಮ್ಮೆಯ ವಿಚಾರ ಎಂದರು.
ಅಕ್ಟೋಬರ್‌ನಲ್ಲಿ ಸಂಸ್ಥೆಯ ಶತಮಾನೋತ್ಸವದ ದೊಡ್ಡ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದೆ. ಇದರ ಸವಿನೆನಪಿಗಾಗಿ ಸಂಶೋಧನಾ ಕೇಂದ್ರದಲ್ಲಿ ಈ ವರ್ಷದಿಂದ ಎರಡು ವರ್ಷಗಳ ಡಿಸಿಇಎಂ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಿದೆ.
ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕಾಫಿ ತೋಟಗಳನ್ನು ಹೇಗೆ ನಿರ್ವಹಣೆ ಮಾಡಬೇಕು. ಕೂಲಿ ಕಾರ್ಮಿಕರ ನಿರ್ವಹಣೆ, ಗೊಬ್ಬರ, ನೀರಾವರಿ ಮತ್ತಿತರ ಬಳಕೆಯ ಬಗ್ಗೆ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಲಾಗುವುದು ಎಂದು ಹೇಳಿದರು.
ಕಾಫಿ ಬೆಳೆಗಾರ ಎಚ್.ಬಿ.ರಾಜಗೋಪಾಲ್, ಕೇಂದ್ರೀಯ ಕಾಫಿ ಮಂಡಳಿ ಸದಸ್ಯರಾದ ಡಾ. ಎಚ್.ಎಸ್.ಕೃಷ್ಣಾನಂದ, ಭಾಸ್ಕರ್ ವೆನಿಲ್ಲಾ, ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಡಾ. ಜೆ.ಎಸ್.ನಾಗರಾಜ್, ಡಾ. ಶಿವಕುಮಾರ್ ಸ್ವಾಮಿ, ಡಾ. ನಂದಗೋಪಾಲ್, ಡಾ. ಸಂತೋಷ್ ರೆಡ್ಡಿ, ಡಾ. ಉಮಾ ಇತರರಿದ್ದರು.