

ತುಮಕೂರು: ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರನ್ನು ಗೊಲ್ಲ-ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಬದಲಾಯಿಸಲು ಹಿರಿಯೂರು ಶಾಸಕಿ ಪೂರ್ಣಿಮಾ ಮುಖ್ಯಮಂತ್ರಿ ಅವರಿಗೆ ಪತ್ರಬರೆದಿದ್ದು, ಕಾಡುಗೊಲ್ಲರನ್ನು ಮುಗಿಸಲು ಹುನ್ನಾರ ನಡೆಸಿದ್ದಾರೆ ಎಂದು ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಜಿ.ಕೆ.ನಾಗಣ್ಣ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಡಕಟ್ಟು ಸಂಸ್ಕೃತಿ ಹೊಂದಿರುವ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ನಡೆದಿದೆ, ಇಂದಲ್ಲ, ನಾಳೆ ಕಾಡುಗೊಲ್ಲ ಸಮುದಾಯ ಎಸ್‌ಟಿ ಜಾತಿಪಟ್ಟಿಗೆ ಸೇರಲಿದೆ, ಈ ಹಂತದಲ್ಲಿ ಗೊಲ್ಲ ಸಮುದಾಯದ ಪೂರ್ಣಿಮಾ ಪದೇಪದೆ ಕಾಡುಗೊಲ್ಲರ ಅಸ್ಮಿತೆಗೆ ಪೆಟ್ಟು ನೀಡುತ್ತಿದ್ದಾರೆ ಎಂದು ಹರಿಹಾಯ್ದರು.
ಕಾಡುಗೊಲ್ಲರು ಎಂದಿಗೂ ನಮಗೆ ನಿಗಮ ಬೇಕು ಎಂದು ಕೇಳಿದವರಲ್ಲ, ನಮ್ಮ ಹೋರಾಟ ಎಸ್‌ಟಿ ಪಟ್ಟಿಗೆ ಸೇರುವುದೇ ಆಗಿದೆ. 2010ರಲ್ಲಿ ಅಂದಿನ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಅಧ್ಯಯನ ನಡೆಸಿ, ಕಾಡುಗೊಲ್ಲರ ಅಭಿವೃದ್ದಿ ನಿಗಮ ಸ್ಥಾಪಿಸಿ, ಅನುದಾನ ಮೀಸಲಿಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. 2020ರಲ್ಲಿ ಶಿರಾ ಉಪಚುನಾವಣೆ ಗೆಲ್ಲುವ ಸಲುವಾಗಿ, ಕಾಡುಗೊಲ್ಲರ ಮತ ಪಡೆಯಲು ಅಂದಿನ ಸರ್ಕಾರ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿ, ಕೊಂಚ ಹಣ ನೀಡಿದೆ. ಆದರೆ ಶಾಸಕಿ ಪೂರ್ಣಿಮಾ ಅವರು, ಕಾಡುಗೊಲ್ಲರ ಅಭಿವೃದ್ಧ್ಧಿ ನಿಗಮದ ಬದಲಾಗಿ, ಸಮಸ್ತ ಗೊಲ್ಲರ ಅಭಿವೃದ್ಧಿ ನಿಗಮ ಎಂದು ಹೆಸರು ಬದಲಾಯಿಸಿದ್ದರು. ನಂತರ ಕಾಡುಗೊಲ್ಲರ ಹೋರಾಟಕ್ಕೆ ಮಣಿದು, ಕಾಡುಗೊಲ್ಲರ ಅಭಿವೃದ್ದಿ ನಿಗಮ ಎಂದು ಮರು ನಾಮಕರಣ ಮಾಡಿ, ಅಧಿಕಾರಿ ಕೂಡ ನೇಮಕ ಮಾಡಲಾಗಿದೆ. ಆದರೆ, ಮತ್ತೆ ಮತ್ತೆ ಪತ್ರ ಬರೆದು ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಬದಲಾಗಿ, ಗೊಲ್ಲ-ಕಾಡುಗೊಲ್ಲ ಅಭಿವೃದ್ದಿ ನಿಗಮವೆಂದು ಬದಲಾಯಿಸಲು ಒತ್ತಾಯಿಸುತ್ತಿರುವುದು ಖಂಡನೀಯ ಎಂದರು.
ರಾಜ್ಯದಲ್ಲಿ ಸುಮಾರು 10 ಲಕ್ಷ ಜನಸಂಖ್ಯೆ ಹೊಂದಿರುವ ಕಾಡುಗೊಲ್ಲ ಸಮುದಾಯಕ್ಕಾಗಿ ಸರ್ಕಾರ ಗೊಲ್ಲ ಅಭಿವೃದ್ದಿ ನಿಗಮ ಸ್ಥಾಪಿಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ, ಆಚಾರ, ವಿಚಾರದಲ್ಲಿ, ಕೊಡು,ತರುವುದು ಇಲ್ಲದ ಗೊಲ್ಲ-ಕಾಡುಗೊಲ್ಲ ಒಂದೇ ಎಂದು ಪ್ರತಿಪಾದಿಸಲು ಹೊರಟಿರುವುದು ಸರಿಯಲ್ಲ. ಇದನ್ನು ಕಾಡುಗೊಲ್ಲರ ಅಸ್ಮಿತೆ ಹೋರಾಟ ಸಮಿತಿ ಹಾಗೂ ಕಾಡುಗೊಲ್ಲರ ಯುವ ಸೇನೆ ಖಂಡಿಸುತ್ತದೆ ಎಂದರು.
ನವೆಂಬರ್ 27ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು, ಜತೆಗೆ ಸರ್ಕಾರದ ಗಮನ ಸೆಳೆಯಲು ಸಿಎಂ ಮನೆಗೆ ಮುತ್ತಿಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಜಿ.ಕೆ.ನಾಗಣ್ಣ ತಿಳಿಸಿದರು.
ಕಾಡುಗೊಲ್ಲರ ಯುವಸೇನೆ ಅಧ್ಯಕ್ಷ ರಮೇಶ್, ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿ ಗೋವಿಂದರಾಜು, ಸುನೀಲ್ ಕುಮಾರ್, ಶಶಿಕುಮಾರ್ ಇದ್ದರು.