ಕಾಡುಗೊಲ್ಲರ ಅಭಿವೃದ್ಧಿ ನಿಗಮ ಹೆಸರು ಬದಲಿಸಲು ಹುನ್ನಾರ: ಶಾಸಕಿ ಪೂರ್ಣಿಮಾ ವಿರುದ್ಧ ಆಕ್ರೋಶ, ಸಂಘಟನಾ ಕಾರ್ಯದರ್ಶಿ ಜಿ.ಎಂ.ಈರಣ್ಣ ಆರೋಪ

05TMK_Kaadugolla_PC
Published on

ತುಮಕೂರು: ಕಾಡುಗೊಲ್ಲರ ಅಭಿವೃದ್ಧಿಗೆ ಸ್ಥಾಪಿಸಿರುವ ರಾಜ್ಯ ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರು ಬದಲಾವಣೆಗೆ ಹುನ್ನಾರ ನಡೆಯುತ್ತಿದ್ದು, ಸರ್ಕಾರ ಒತ್ತಡಕ್ಕೆ ಮಣಿದು ಹೆಸರು ಬದಲಿಸಿದರೆ ಹೋರಾಟ ಅನಿವಾರ್ಯ ಎಂದು ರಾಜ್ಯ ಕಾಡುಗೊಲ್ಲರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಂ.ಈರಣ್ಣ ಹೇಳಿದರು.

ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಶಿರಾ ಉಪಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ನಿಗಮ ಸ್ಥಾಪಿಸಲಾಗಿದೆ. ಆದರೆ, ಹಿರಿಯೂರು ಶಾಸಕಿ ಪೂರ್ಣಿಮಾ, ಸಮಗ್ರ ಗೊಲ್ಲರ ಅಭಿವೃದ್ಧಿ ನಿಗಮ ಎಂದು ಮರು ನಾಮಕರಣ ಮಾಡಲು ಸರ್ಕಾರಕ್ಕೆ ಪತ್ರ ಬರೆದಿರುವುದು ಕಾಡುಗೊಲ್ಲರು ಎಸ್‌ಟಿ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟದ ಹಿನ್ನೆಡೆಗೆ ಹುನ್ನಾರ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಶಿರಾ ಹಾಗೂ ಹಿರಿಯೂರಿನಲ್ಲಿ ಕಾಡುಗೊಲ್ಲರ ಮತಗಳಿಂದಲೇ ಬಿಜೆಪಿ ಗೆಲುವು ಪಡೆದಿದ್ದು, ಕೂಡಲೇ ಕಾಡುಗೊಲ್ಲರ ಋಣ ತೀರಿಸಬೇಕು, ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸಬೇಕು, ಅನುದಾನ ನೀಡಿ ಸಮುದಾಯದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.

ಸಮುದಾಯದ ಮುಖಂಡ ಡಾ.ಶಿವಕುಮಾರಸ್ವಾಮಿ ಮಾತನಾಡಿ, ಸರ್ಕಾರ ಒತ್ತಡಕ್ಕೆ ಮಣಿದು ಕಾಡುಗೊಲ್ಲರ ಅಭಿವೃದ್ದಿ ನಿಗಮದ ಹೆಸರನ್ನು ಗೊಲ್ಲ-ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಬದಲಾಯಿಸಲು ಹೊರಟಿರುವುದು ಸರಿಯಲ್ಲ. ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸಲಿದ್ದೇವೆ ಎಂದರು.

ಮುಖಂಡರಾದ ಹನುಮಂತರಾಜು, ಜಿ.ಕೆ.ನಾಗಣ್ಣ, ರಮೇಶ್, ಗೋಪಿ ಯಾದವ್, ರಾಜಣ್ಣ, ಡಾ.ಶಿವಕುಮಾರಸ್ವಾಮಿ, ಗೌಡರಂಗಪ್ಪ, ಡಾ.ಜಯರಾಮ್ ಮತ್ತಿತರರು ಇದ್ದರು.

ಗೊಲ್ಲರ ಅಭಿವೃದ್ಧಿ ನಿಗಮ ಮಾಡಲು ನಮ್ಮ ತರಕಾರು ಇಲ್ಲ. ಆದರೆ, ಆಚಾರ-ವಿಚಾರಗಳಲ್ಲಿ ಭಿನ್ನವಾಗಿರುವ ಮತ್ತು ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕಾಡುಗೊಲ್ಲರಿಗಿಂತಲೂ ಬಲಾಢ್ಯರಾಗಿರುವ ಗೊಲ್ಲ ಸಮುದಾಯವನ್ನು ಕಾಡುಗೊಲ್ಲರೊಂದಿಗೆ ಸೇರಿಸಿದರೆ ನಮ್ಮ ಬಹುದಿನದ ಹಾಗೂ ಮುಖ್ಯ ಹೋರಾಟವಾಗಿರುವ ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಆಗ್ರಹಕ್ಕೆ ಹಿನ್ನಡೆಯಾಗಲಿದೆ. ಜಿ.ಎಂ.ಈರಣ್ಣ, ಕಾಡುಗೊಲ್ಲರ ಸಂಘದ ಸಂಘಟನಾ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net