ಕಾಡಿನಲ್ಲಿ ಪೊಟರೆಯಲ್ಲಿ ಗೂಡು ಮಾಡುವ ಹಕ್ಕಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ

ಕಾಡಿನಲ್ಲಿ ಪೊಟರೆಯಲ್ಲಿ ಗೂಡು ಮಾಡುವ ಹಕ್ಕಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ.
20
Published on

ಕಾಡಿನಲ್ಲಿ ಪೊಟರೆಯಲ್ಲಿ ಗೂಡು ಮಾಡುವ ಹಕ್ಕಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಅವುಗಳಿಗೆ ಪೊಟರೆಗಳೇ ಸಿಗುತ್ತಿಲ್ಲ ಎಂದು ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಛಾಯಾಗ್ರಾಹಕ ಸೇನಾನಿ ಹೇಳಿದರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಆಯೋಜಿಸಿರುವ ಛಾಯಾಗ್ರಾಹಕರಾದ ಬಿ.ಶಿವಕುಮಾರ್, ಸುನಿಲ್ ಪಾಲಹಳ್ಳಿ, ಕೆ.ಜಿ.ಸಿದ್ದಲಿಂಗ ಪ್ರಸಾದ್ ಅವರ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ದೊಡ್ಡ ಮರಗಳು ಇಲ್ಲವಾಗಿವೆ. ದೊಡ್ಡ ದಾಸ ಮಂಗಟ್ಟೆಗೆ ದೊಡ್ಡ ಪೊಟರೆಯೇ ಬೇಕು. ಹಸಿ ಮರದಲ್ಲಿ ಗೂಡು ಮಾಡುವ ತಾಕತ್ತಿರುವುದು ಮರಕುಟಿಕಗಳಿಗೆ ಮಾತ್ರ. ಊರು ಪಕ್ಕದಲ್ಲಿರುವ ಒಣಗಿದ ಮರಗಳು ಖಾಲಿಯಾಗಿವೆ. ಈ ಹಕ್ಕಿಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಅವು ನಗರದ ಹೊರವಲಯಕ್ಕೆ ಬರುತ್ತಿವೆ ಎಂದರು.

ಮೈಸೂರು ಹೊರವಲಯದಲ್ಲಿ ರಿಯಲ್ ಎಸ್ಟೇಟ್‌ನಿಂದಾಗಿ ತೆಂಗಿನ ತೋಟಗಳನ್ನು ನಗರದವರು ಕೊಳ್ಳುತ್ತಿದ್ದಾರೆ. ಅಲ್ಲಿ ಪೊಟರೆಯಲ್ಲಿ ಗೂಡು ಕಟ್ಟುವ ಹಕ್ಕಿಗಳ ತಾಣವಾಗುತ್ತಿದೆ. ನಗರ ಬೆಳೆಯುತ್ತಿದ್ದಂತೆ ಅಲ್ಲಿಂದ ಅವುಗಳ ತಾಣ ಬೇರೆಯಾಗುತ್ತಿದೆ ಎಂದು ಹೇಳಿದರು.

ಮರಕುಟಿಕದ ಕೊಕ್ಕು ತಲೆಯ ಮೂಳೆವರೆಗೂ ಚಾಚಿರುತ್ತದೆ. ಹೀಗಾಗಿ ಗಟ್ಟಿಯಾದ ಮರವನ್ನೂ ಕೊರೆದು ಬಿಡುತ್ತದೆ. ಉಳಿದ ಹಕ್ಕಿಗಳಿಗೆ ಈ ಕೊಕ್ಕಿನ ವಿನ್ಯಾಸವಿಲ್ಲ. ಗಿಳಿ, ಮೈನಾ ಸೇರಿದಂತೆ ಎಲ್ಲ ಹಕ್ಕಿಗಳು ಈ ಪೊಟರೆಘಳ ಬಾಡಿಗೆ ಮನೆಗೆ ಹೋರಾಟ ಮಾಡುತ್ತವೆ ಎಂದು ವಿವರಿಸಿದರು.

ಕೃಪಾಕರ ಮಾತನಾಡಿ, ಕೆಲವು ವರ್ಷವಷ್ಟೇ ಸ್ಥಿರ ಛಾಯಾಗ್ರಹಣ ಮಾಡಿದ್ದೆವು. ಆಗೆಲ್ಲ ವಿಜ್ಞಾನದ ಓದು ಹಾಗೂ ವಿಜ್ಞಾನಿಗಳ ಚರ್ಚೆ ಹೆಚ್ಚಿತ್ತು. ನಮ್ಮ ಫೋಟೊಗಳು ವಿಜ್ಞಾನಿಗಳು ತೆಗೆದ ಹಾಗೆ ಇರುತ್ತಿದ್ದವು ಎಂದು ಸ್ಮರಿಸಿದರು.ವಿಶ್ವದ ಯಾವ್ಯಾವ ಪರಿಸರ ನಿಯತಕಾಲಿಕೆಗಳಲ್ಲಿ ಹೇಗೆ ಚಿತ್ರಗಳು ಬರುತ್ತಿವೆ ಎಂಬುದನ್ನು ಛಾಯಾಗ್ರಾಹಕರು ನೋಡಬೇಕು. ಈ ಪ್ರದರ್ಶನದ ಚಿತ್ರಗಳು ಸೊಗಸಾಗಿದ್ದು, ಕಥೆಗಳನ್ನು ಹೇಳುತ್ತಿವೆ ಎಂದು ಶ್ಲಾಘಿಸಿದರು. ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಹಾಜರಿದ್ದರು. ಪ್ರದರ್ಶನವು ನ.3 ರವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net