ಕಾಡಾನೆಗಳ ದಾಳಿಗೆ ಭತ್ತದ ಬೆಳೆ ನಾಶ

19Kush01
Published on

ವಿಜಯವಾಣಿ ಸುದ್ದಿಜಾಲ

ಕುಶಾಲನಗರ: ಕುಶಾಲನಗರ ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಎಚ್.ಎಚ್.ನಾಗರಾಜ್ ಹಾಗೂ ಹನುಮಂತಪ್ಪ ಅವರ ಗದ್ದೆಗೆ ಭಾನುವಾರ ರಾತ್ರಿ ದಾಳಿ ಮಾಡಿದ ಕಾಡಾನೆಗಳು, ಭತ್ತದ ಬೆಳೆಯನ್ನು ತಿಂದು ನಾಶ ಮಾಡಿವೆ. ಅತ್ತೂರು ಆನೆಕಾಡು ಅರಣ್ಯ ಪ್ರದೇಶದದಿಂದ ಬರುವ ಕಾಡಾನೆಗಳ ಹಿಂಡು, ಬೆಳೆ ಕೈಗೆ ಬರುವ ಮೊದಲೇ ನಾಶಪಡಿಸುತ್ತಿವೆ ಎಂದು ರೈತರು ದೂರಿದ್ದಾರೆ. ಕಳೆದ ವಾರ ಇದೇ ರೀತಿಯಲ್ಲಿ ದಾಳಿ ಮಾಡಿದ್ದ ಕಾಡಾನೆಗಳ ಹಿಂಡು ಸಂಪೂರ್ಣ ಬೆಳೆಯನ್ನು ನಾಶಪಡಿಸಿದ್ದವು. ಎರಡು ದಿನದ ಹಿಂದೆ ಮತ್ತೊಮ್ಮೆ ಉಳುಮೆ ಮಾಡಿ, ಭತ್ತದ ಪೈರುಗಳನ್ನು ನಾಟಿ ಮಾಡಲಾಗಿತ್ತು. ಭಾನುವಾರ ರಾತ್ರಿ ಕಾಡಾನೆಗಳು ದಾಳಿ ಮಾಡಿ ನಾಟಿ ಮಾಡಿದ್ದ ಸಂಪೂರ್ಣ ಗದ್ದೆಗಳಲ್ಲಿ ಓಡಾಡಿ ನಾಶಪಡಿಸಿವೆ. ಬೆಂಡೆಬೆಟ್ಟ ಮೂಲಕ ಹಾರಂಗಿ ನದಿ ದಾಟಿ ಬರುವ ಕಾಡಾನೆಗಳನ್ನು ತಕ್ಷಣವೇ ಅನೆಕಾಡು ವ್ಯಾಪ್ತಿಗೆ ಓಡಿಸಲು ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಇಲ್ಲಿಯ ಸ್ಥಳೀಯ ನಾಗರಿಕರು ಮತ್ತು ರೈತರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net