ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ

18MDG2 bjp
ಮೂಡಿಗೆರೆ ಬಿಜೆಪಿ ಕಚೇರಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಅವರನ್ನು ಮುಖಂಡರು ಮತ್ತು ಕಾರ್ಯಕರ್ತರು ಸನ್ಮಾನಿಸಿದರು. ಟಿ.ಎಂ.ಗಜೇಂದ್ರ, ದೀಪಕ್ ದೊಡ್ಡಯ್ಯ, ಬಿ.ಎನ್.ಜಯಂತ್, ಜೆ.ಎಸ್.ರಘು, ಪರೀಕ್ಷಿತ್ ಜಾವಳಿ, ವೆಂಕಟೇಶ್, ಆರ್.ಜಗದೀಶ್ ಇತರರಿದ್ದರು.
Published on

ಮೂಡಿಗೆರೆ: ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಕಾಡಾನೆ ಕಾಟದಿಂದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರು ಜಮೀನಿಗೆ ಹೋಗಲು ಸಾಧ್ಯವಾಗದೆ ಜಮೀನು ಪಾಳು ಬಿಡಬೇಕಾಗಿದೆ. ಸರ್ಕಾರ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.

ಪಟ್ಟಣದ ಬಿಜೆಪಿ ಕಚೇರಿಗೆ ಶನಿವಾರ ಭೇಟಿ ನೀಡಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಡಾನೆ ದಾಳಿಗೆ ಆಗಾಗ ಜನ ಬಲಿಯಾಗುತ್ತಿದ್ದಾರೆ. ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟಾಗ ಅಧಿಕಾರಿಗಳು ಓಡಿಸುತ್ತಾರೆ. ಇದರಿಂದ ಪ್ರಯೋಜನವಿಲ್ಲ. ಅರಣ್ಯ ಪ್ರದೇಶದಲ್ಲಿ ಕಾಡಾನೆ ಕಾರಿಡಾರ್ ನಿರ್ಮಿಸಿ ಎಲ್ಲ ಕಾಡಾನೆಗಳನ್ನು ಹಿಡಿದು ಕಾರಿಡಾರ್‌ಗೆ ಸಾಗಿಸಬೇಕು. ಮೀಸಲು ಅರಣ್ಯ ಪ್ರದೇಶದಿಂದ ಕಾಡಾನೆ ಸೇರಿದಂತೆ ಇತರ ಕಾಡುಪ್ರಾಣಿಗಳು ನಾಡಿಗೆ ಲಗ್ಗೆ ಇಡದಂತೆ ಅರಣ್ಯದ ಸುತ್ತ ರೈಲ್ವೆ ಬ್ಯಾರಿಕೇಡ್ ಮತ್ತು ಟೆಂಟಕಲ್ ಬೇಲಿ ನಿರ್ಮಿಸಬೇಕು. ರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಕಾಡಾನೆಯಿಂದ ಬಲಿಯಾದವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಹಾಗೂ 25 ಲಕ್ಷ ರೂ. ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತರ ಒತ್ತುವರಿ ಜಮೀನು ತೆರವುಗೊಳಿಸಲು ಅರಣ್ಯ ಇಲಾಖೆ ತಯಾರಿ ನಡೆಸಿದೆ. ರೈತರಿಗೆ ಮಾರಕವಾಗಿರುವ ಅರಣ್ಯ ಕಾಯ್ದೆ ಸೆಕ್ಷನ್ 4ಗೆ ತಿದ್ದುಪಡಿ ತಂದು ರೈತರ ಒತ್ತುವರಿ ಜಮೀನು ಗುತ್ತಿಗೆ ಪಡೆಯಲು ಅದೆ ರೈತರಿಗೆ ಅವಕಾಶ ಕಲ್ಪಿಸಬೇಕು. ರೈತರ ಜಮೀನು ಖುಲ್ಲಾಗೊಳಿಸಲು ಮುಂದಾಗಬಾರದು. ಫಾರ್ಮ್ 53 ಮತ್ತು 57 ಅರ್ಜಿಗಳನ್ನು ಸರ್ಕಾರ ವಜಾಗೊಳಿಸುತ್ತಿರುವುದು ಸರಿಯಲ್ಲ. ಎಲ್ಲ ಅರ್ಜಿಗಳನ್ನು ಮರು ಪರಿಶೀಲಿಸಿ ಆಯಾ ರೈತರಿಗೆ ಮಂಜೂರಾತಿ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಎಂ.ಗಜೇಂದ್ರ, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಜೆ.ಎಸ್.ರಘು, ಬಿ.ಎನ್.ಜಯಂತ್, ವೆಂಕಟೇಶ್, ಎಂ.ಆರ್.ಜಗದೀಶ್, ಪರೀಕ್ಷಿತ್ ಜಾವಳಿ, ಪ್ರಶಾಂತ್, ಪಂಚಾಕ್ಷರಿ, ರಂಗನಾಥ್, ಆದರ್ಶ ಕುಪ್ಪಳ್ಳಿ, ಮೋಹನ್, ಪದ್ಮಣ್ಣ , ಪ್ರವೀಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net