ಕಾಡಾನೆ ದಾಳಿಗೆ ಆಶ್ರಮ ಶಾಲೆ ಕಾಂಪೌಂಡ್ ಧ್ವಂಸ

9HDK2
ಎಚ್.ಡಿ.ಕೋಟೆ ತಾಲೂಕಿನ ಬಸವನಗಿರಿ ಹಾಡಿಯ ಸಮೀಪದ ಆಶ್ರಮ ಶಾಲೆಯ ಕಾಂಪೌಂಡ್ ಕಾಡಾನೆ ದಾಳಿಗೆ ನೆಲಕ್ಕುರುಳಿರುವುದು.
Published on

ಬಸವನಗಿರಿ ಹಾಡಿ


ಎಚ್.ಡಿ.ಕೋಟೆ: ತಾಲೂಕಿನ ಬಸವನಗಿರಿ ಹಾಡಿಯಲ್ಲಿ ಬುಧವಾರ ರಾತ್ರಿ ಕಾಡಾನೆ ದಾಳಿಗೆ ಆಶ್ರಮ ಶಾಲೆ ಕಾಂಪೌಂಡ್ ಹಾಗೂ ಆವರಣದಲ್ಲಿ ಬೆಳದಿದ್ದ ಬಾಳೆ ಗಿಡ ನಾಶವಾಗಿದೆ.


ಅರಣ್ಯದಿಂದ ಆಹಾರ ಅರಸಿ ಬಂದ ಕಾಡಾನೆ ಆಶ್ರಮ ಶಾಲೆ ಆವರಣದಲ್ಲಿದ್ದ ಬಾಳೆ ಗಿಡವನ್ನು ಕಂಡು ಒಳಗೆ ಪ್ರವೇಶಿಸಲು ದಾರಿ ಇಲ್ಲದಿದ್ದಾಗ ಕೊನೆಗೆ ಕಾಂಪೌಂಡ್ ಅನ್ನು ನೆಲಕ್ಕೆ ಉರುಳಿಸಿ ನಂತರ ಶಾಲಾ ಆವರಣಕ್ಕೆ ನುಗ್ಗಿ ಬಾಳೆ ಗಿಡವನ್ನು ತಿಂದು ನಾಶಪಡಿಸಿದೆ.


ಇತ್ತ ಆಶ್ರಮ ಶಾಲೆಯಲ್ಲಿ ಮಲಗಿದ್ದ ಅಡುಗೆ ಸಿಬ್ಬಂದಿ ಶಬ್ದ ಕೇಳಿ ಹೊರಗೆ ಬಂದು ಕಾಡಾನೆ ನೋಡಿ ಕೂಗಿಕೊಂಡಿದ್ದಾರೆ. ನಂತರ ಕಾಡಾನೆ ಶಾಲೆ ಬಿಟ್ಟು ಮೇಟಿಕುಪ್ಪೆ ಅರಣ್ಯದೊಳಗೆ ಸೇರಿಕೊಂಡಿತು. ಘಟನೆಯಿಂದಾಗಿ ಸುಮಾರು 50 ಮೀಟರ್ ಕಾಂಪೌಂಡ್ ನೆಲಕ್ಕೆ ಉರುಳಿ ಬಿದ್ದಿದೆ.


ಆಶ್ರಮ ಶಾಲೆ ಕಾಡಂಚಿನಲ್ಲಿರುವುದರಿಂದ ರಾತ್ರಿ ವೇಳೆ ಕಾಡು ಪ್ರಾಣಿಗಳು ಶಾಲೆ ಸಮೀಪದಲ್ಲಿ ಬಂದು ಹೋಗುವುದು ಸಾಮಾನ್ಯ. ಆದರೀಗ ಕಾಂಪೌಂಡ್ ನಾಶವಾಗಿರುವುದರಿಂದ ಆಶ್ರಮ ಶಾಲೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಯಭೀತರಾಗಿದ್ದಾರೆ.


ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ನಾರಾಯಣ ಸ್ವಾಮಿ ಸ್ಥಳಕ್ಕೆ ಭೇಟಿ ನೀರಿ ಪರಿಶೀಲಿಸಿದರು. ರಾತ್ರಿ ವೇಳೆ ಆಶ್ರಮ ಶಾಲೆ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ನಡೆಸಬೇಕು ಹಾಗೂ ಕಾಂಪೌಂಡ್ ಮರು ನಿರ್ಮಿಸಬೇಕು ಎಂದು ಮೇಟಿಕುಪ್ಪೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.


ತಪ್ಪಿದ ಭಾರಿ ಅನಾಹುತ: ಬುಧವಾರ ಗೌರಿ-ಗಣೇಶ ಹಬ್ಬ ಇದ್ದ ಕಾರಣ ಆಶ್ರಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಸ್ವಗ್ರಾಮಕ್ಕೆ ತೆರಳಿದ್ದರು. ಹಾಗಾಗಿ ಅಡುಗೆ ಸಿಬ್ಬಂದಿ ಮಾತ್ರ ಇದ್ದರು. ಇದರಿಂದಾಗಿ ಭಾರಿ ಅನಾಹುತ ತಪ್ಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net