

ಹನಗೋಡು: ಗಿಳಿ ಹಾಗೂ ಪಕ್ಷಿಗಳ ಕಾಟದಿಂದಾಗಿ ನಾಗರಹೊಳೆ ಉದ್ಯಾನದಂಚಿನ ಗ್ರಾಮಗಳ ಜಮೀನುಗಳಲ್ಲಿ ಮುಸುಕಿನ ಜೋಳ ನಾಶವಾಗಿದೆ.
ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಅತಿವೃಷ್ಟಿ ಉಂಟಾಗಿದ್ದರೂ ಕಾಡಂಚಿನ ಗ್ರಾಮಗಳಾದ ನೇರಳಕುಪ್ಪೆ, ಚಂದನಗಿರಿ, ಬಿಲ್ಲೆನಹೊಸಹಳ್ಳಿ, ಶೆಟ್ಟಹಳ್ಳಿ, ಕಾಳಬೋಚನಹಳ್ಳಿ ಉಡುವೇಪುರ ಕಚುವಿನಹಳ್ಳಿ, ಕೆಜಿ ಹೆಬ್ಬನಕುಪ್ಪೆ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆ ಬೆಳೆದಿದ್ದಾರೆ. ಜಮೀನುಗಳಲ್ಲಿ ಬಿತ್ತನೆ ಮುಗಿದು ಗಿಡಗಳು ಬೆಳೆಯುತ್ತಿದ್ದಂತೆ ಅವುಗಳಿಗೆ ರೋಗಬಾಧೆ ಕಾಡದಂತೆ ಪ್ರತಿ ಹಂತದಲ್ಲೂ ಎಚ್ಚರ ವಹಿಸುತ್ತಿದ್ದಾರೆ. ಕಾಡುಪ್ರಾಣಿಗಳ ಉಪಟಳಕ್ಕೂ ಕಡಿವಾಣ ಹಾಕುವ ಮೂಲಕ ಹಗಲು ರಾತ್ರಿ ಎನ್ನದೆ ಕಾವಲು ಕಾಯುತ್ತಿದ್ದಾರೆ.
ಈಗಾಗಲೇ ಕೆಲವೆಡೆ ಬೆಳೆ ಕಟಾವು ಹಂತಕ್ಕೆ ಬಂದಿದ್ದು, ಇನ್ನೊಂದೆಡೆ ಬೆಳೆ ಬೆಳವಣಿಗೆ ಹಂತದಲ್ಲಿದೆ. ಆದರೆ ಈಗ ಈ ಬೆಳೆಗಳನ್ನು ನಿತ್ಯ ನೂರಾರು ಗಿಳಿಗಳು ಹಾಗೂ ಇತರ ಪಕ್ಷಿಗಳ ಹಿಂಡು ತಿಂದು ಹಾಕುತ್ತಿವೆ. ಇದರಿಂದಾಗಿ ಖರ್ಚು ಬರುವುದೂ ಕಷ್ಟವಾಗಿದೆ.
ಅತಿವೃಷ್ಟಿ ನಡುವೆಯೂ ಕಷ್ಟಪಟ್ಟು ಮುಸುಕಿನ ಜೋಳ ಬೆಳೆ ಬೆಳೆದಿದ್ದು, ಉತ್ತಮ ಬೆಳೆಯು ಬಂದಿದೆ. ಆದರೆ ಈಗ ಗಿಳಿಗಳು ಸೇರಿದಂತೆ ಇತರ ಪಕ್ಷಿಗಳು ಜೋಳವನ್ನು ತಿಂದು ಹಾಕುತ್ತಿವೆ. ಇದರ ಜತೆಗೆ ಕಾಡು ಹಂದಿಗಳ ಕಾಟವೂ ಹೆಚ್ಚುತ್ತಿದೆ. ಇವುಗಳ ಹಾವಳಿ ತಪ್ಪಿಸುವುದೇ ಕಷ್ಟವಾಗಿದೆ.
ಸುರೇಶ್ ರೈತ, ಕಚುವಿನಹಳ್ಳಿ