

ನಂಜನಗೂಡು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತವನ್ನು ನೋಡಿ ಬಿಜೆಪಿಗೆ ಮತ ಹಾಕಿದವರು ರೋಸಿ ಹೋಗಿದ್ದು, ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಆಡಳಿತ ವ್ಯತ್ಯಾಸವನ್ನು ಜನತೆಗೆ ತಿಳಿಸುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪಾದಯಾತ್ರೆ ಸಮಾರೋಪದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ. ಜನಪರವಾದ ಆಡಳಿತ ನೀಡುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಸಹಕಾರ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಬಗ್ಗೆ ಸ್ವತಃ ಆಡಳಿತ ಪಕ್ಷದ ಸಚಿವ ಮಾಧುಸ್ವಾಮಿ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಆಶ್ವಾಸನೆಗಳನ್ನು ಜಾರಿಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆಗಳಲ್ಲಿ ಕೇವಲ ಶೇ.9ರಷ್ಟು ಮಾತ್ರ ಈಡೇರಿಸಲು ಸಾಧ್ಯವಾಗಿರುವುದು ಹಾಸ್ಯಸ್ಪದ ಎಂದು ಲೇವಡಿ ಮಾಡಿದರು.
ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಮಹಾನ್ ನಾಯಕರ ನೈಜ ಇತಿಹಾಸವನ್ನೇ ತಿರುಚಿ ನಾಡಿನ ಜನತೆಯಿಂದ ಸರ್ಕಾರ ತಪರಾಕಿಗೆ ಒಳಗಾಗಿದೆ. ಬಿಜೆಪಿ ಆಡಳಿತದಿಂದ ಜನ ಬೇಸತ್ತಿದ್ದಾರೆ. ಪಾದಯಾತ್ರೆಯಲ್ಲಿ ಹೋದ ಕಡೆಯೆಲ್ಲ ಬಿಜೆಪಿ ಆಡಳಿತ ವಿರೋಧ ಅಲೆ ಎದ್ದು ಕಾಣುತ್ತಿದೆ. ಬಿಜೆಪಿಯವರೇ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಗ್ರ ಭಾರತ ಅಭಿವೃದ್ಧಿಪಡಿಸುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಎಂಬುದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜನತೆಗೆ ಮನವರಿಕೆ ಮಾಡಿಕೊಡಬೇಕು. ಬಿಜೆಪಿ ಆಡಳಿತ ವೈಫಲ್ಯಗಳ ಸರಮಾಲೆಯನ್ನು ಜನತೆಗೆ ಮನದಟ್ಟು ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.
ನಂಜನಗೂಡು ಸಮಗ್ರ ಅಭಿವೃದ್ಧಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 1200 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ನೀಡಿದ್ದರು. ಈಗಿನ ಶಾಸಕರು ಕ್ಷೇತ್ರಕ್ಕೆ ಏನು ಯೋಜನೆ ತಂದಿದ್ದಾರೆ ಎಂಬುದನ್ನು ಜನತೆ ಪರಾಮರ್ಶೆ ಮಾಡಲಿ ಎಂದು ಹೇಳಿದರು.
ಶಾಸಕ ಡಾ.ಎಸ್.ಯತೀಂದ್ರ ಮಾತನಾಡಿ, ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುವ ಬದಲು ಧರ್ಮಾಧಾರಿತ ರಾಜಕಾರಣ ಮಾಡುವ ಮೂಲಕ ಜನರ ನಡುವೆ ವೈಷಮ್ಯದ ಬೀಜ ಬಿತ್ತುತ್ತಿದೆ. ಜನಸಾಮಾನ್ಯರು ಬಳಸುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರ, ಕಾರ್ಪೋರೇಟ್ ವಲಯದ ತೆರಿಗೆಯನ್ನು ಶೇ.10ರಷ್ಟು ಇಳಿಕೆ ಮಾಡಿದೆ. ಬಂಡವಾಳಶಾಯಿಗಳ ಪರವಾಗಿರುವ ಬಿಜೆಪಿಗೆ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ. ಮಹಾತ್ಮ ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ದೇವರೆಂದು ಪೂಜಿಸುವ ಹಾಗೂ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ಹೇಡಿ ಸಾವರ್ಕರ್ ವೀರ ಸೇನಾನಿ ಎಂದು ಬಿಂಬಿಸುತ್ತಿರುವ ಬಿಜೆಪಿಯು ಇತಿಹಾಸವನ್ನು ತಿರುಚಿ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಆಪಾದಿಸಿದರು.
ಕ್ಷೇತ್ರದಲ್ಲಿ 8 ದಿನಗಳ ಕಾಲ ನಡೆದ (150 ಕಿ.ಮೀ.)ಪಾದಯಾತ್ರೆಗೆ ಬುಧವಾರ ತೆರೆ ಬಿತ್ತು. ಪಾದಯಾತ್ರೆಯ ಅಂತಿಮ ದಿನದ ಅಂಗವಾಗಿ ಸುಮಾರು 600 ಅಡಿ ಉದ್ದ ಬಾವುಟವನ್ನು ಕಾರ್ಯಕರ್ತರು ಪ್ರದರ್ಶಿಸುತ್ತ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವ ಮೂಲಕ ಗಮನ ಸೆಳೆದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಡಾ.ಎಸ್.ಯತೀಂದ್ರ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಲತಾಸಿದ್ದಶೆಟ್ಟಿ, ಎಸ್ಟಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಜಿಪಂ ಮಾಜಿ ಸದಸ್ಯರಾದ ಪುಷ್ಪಾ ನಾಗೇಶ್‌ರಾಜ್, ಕೆ.ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಶ್ರೀಕಂಠನಾಯ್ಕ, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್‌ರಾಜ್, ಕ್ಷೇತ್ರ ಉಸ್ತುವಾರಿ ಸೋಮೇಶ್ ಹಲವರಿದ್ದರು.