ಕಾಂಗ್ರೆಸ್‌ಗೆ ಮತಿಭ್ರಮಣೆಯಾಗಿದೆ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪ

25Tmk_BJP_Protest (1)
Published on

ತುಮಕೂರು: ಶಿವಮೊಗ್ಗದ ಹಿಂದು ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಟೌನ್‌ಹಾಲ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶವನ್ನು ಮತ್ತೊಂದು ತಾಲಿಬಾನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಹಲವು ಉದಾಹರಣೆಗಳು ಕಣ್ಣಮುಂದಿದ್ದು ಹರ್ಷ ಕೊಲೆ ಇದರಲ್ಲಿ ಒಂದು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯಾದ್ಯಂತ ಸುಮಾರು 27 ಹಿಂದು ಕಾರ್ಯಕರ್ತರ ಕಗ್ಗೊಲೆಯಾಗಿದೆ. ಈವರೆಗೆ ಯಾರಿಗೂ ಸರಿಯಾದ ಶಿಕ್ಷೆಯಾಗಿಲ್ಲ. ಸದನದಲ್ಲಿ ಕಾಂಗ್ರೆಸ್ ನಾಯಕರು ನೀಡಿದ ಪ್ರಚೋದನಾತ್ಮಕ ಹೇಳಿಕೆಗಳಿಂದ ಉತ್ತೇಜನ ಪಡೆದ ಕೆಲವರು ಹರ್ಷನ ಕೊಲೆ ಮಾಡಿದರು. ಹಿಜಾಬ್ ಗಲಭೆಯೇ ಹರ್ಷನ ಕೊಲೆಗೆ ಮೂಲ ಕಾರಣ. ಇದರ ವಿರುದ್ಧ ಫೆ.27ರವರೆಗೆ ಬಿಜೆಪಿಯಿಂದ ಎಲ್ಲಾ ತಾಲೂಕುಗಳಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಅಧಿಕಾರ ಕಳೆದುಕೊಂಡು ಕಾಂಗ್ರೆಸ್‌ಗೆ ಮತಿಭ್ರಮಣೆಯಾಗಿದೆ. ಭವಿಷ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೋ ಇಲ್ಲವೋ ಎಂಬ ಅನುಮಾನ ಉಂಟಾಗಿದೆ. ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟಿ, ಅಧಿಕಾರ ಅನುಭವಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಈ ರೀತಿಯ ಕೋಮುದಳ್ಳುರಿ ಸೃಷ್ಟಿಸುತ್ತಿದೆ ಎಂದು ಬಿಜೆಪಿ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಆರೋಪಿಸಿದರು.

ಕಾಂಗ್ರೆಸ್‌ನ ಅಧಿಕಾರದಾಹ ದೇಶವನ್ನು, ರಾಜ್ಯವನ್ನು ಸುಡುತ್ತಿದೆ. ಕಾಂಗ್ರೆಸ್ಸಿಗರು ಮತೀಯ ಗಲಭೆ ಸೃಷ್ಟಿಸುವುದು ಹೊಸದಲ್ಲ. ನಮ್ಮ ಆಡಳಿತ ಸಹಿಸಲು ಸಾಧ್ಯವಿಲ್ಲದೆ ಈಗ ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಹರಿಹಾಯ್ದರು.

ಮೇಯರ್ ಬಿ.ಜಿ.ಕೃಷ್ಣಪ್ಪ, ಜಿಲ್ಲಾ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ,ಟೂಡಾ ಅಧ್ಯಕ್ಷ ಬಿ.ಎಸ್.ನಾಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಹೆಬ್ಬಾಕ, ಟಿ.ಎಚ್.ಹನುಮಂತರಾಜು, ಟಿ.ಆರ್.ಸದಾಶಿವಯ್ಯ, ಕೊಪ್ಪಲ್ ನಾಗರಾಜು, ರುದ್ರೇಶ್, ರಾಜೀವ್, ಚಂದ್ರಶೇಖರ್, ಕೆ.ಪಿ.ಮಹೇಶ್, ಪಾಲಿಕೆ ಸದಸ್ಯರಾದ ಕೆ.ಎಸ್.ಮಂಜುಳಾ, ವಿ.ಎಸ್.ಗಿರಿಜಾ, ನವೀನಾ ಮತ್ತಿತರರು ಹಾಜರಿದ್ದರು.

ಕಾಂಗ್ರೆಸ್ ಪ್ರಚೋದನೆಯೇ ಕಾರಣ

ಶಿವಮೊಗ್ಗದಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತ ಹರ್ಷನ ಕೊಲೆಗೆ ಕಾಂಗ್ರೆಸ್ ನಾಯಕರ ಪ್ರಚೋದಿತ ಹೇಳಿಕೆಗಳೇ ಕಾರಣ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಗಂಭೀರ ಆರೋಪಿಸಿದರು.

ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಪ್ರಚೋದಿತ ಹೇಳಿಕೆಗಳು ಒಂದು ಸಮುದಾಯವನ್ನು ಕೆರಳಿಸಿದ್ದು ನಮ್ಮ ಕಾರ್ಯಕರ್ತನ ಹತ್ಯೆಗೆ ಕಾರಣ. ಹಾಗೆಯೇ ಸದನದಲ್ಲೂ ಕಲಾಪಗಳನ್ನು ವ್ಯರ್ಥ ಮಾಡುವ ಮೂಲಕ ಜನವಿರೋಧಿಯಾಗಿ ನಡೆದುಕೊಂಡಿದ್ದಾರೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಹರ್ಷನ ಹತ್ಯೆ ಪೂರ್ವ ನಿಯೋಜಿತ ದುಷ್ಕೃತ್ಯ. ಇನ್ನೂ ಈಶ್ವರಪ್ಪ ವಿರುದ್ಧ ಸುಳ್ಳು ಹೇಳಿಕೆ ನೀಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುಳ್ಳಿನ ಕುಮಾರ್ ಆಗಿದ್ದಾರೆ. ಸದನದಲ್ಲಿ ಸಚಿವ ಈಶ್ವರಪ್ಪ ಮೇಲೆ ಹಲ್ಲೆಗೆ ಮುಂದಾದ ಡಿಕೆಶಿ ತಮ್ಮ ನೈಜ ಗೂಂಡಾ ಪ್ರವೃತ್ತಿಯನ್ನು ತೋರಿಸುತ್ತಿದ್ದಾರೆ. ಜತೆಗೆ ಕಾಂಗ್ರೆಸ್ ಧರಣಿಯಿಂದ ಕಲಾಪಗಳು ಬಲಿಯಾಗಿವೆ ಎಂದು ಕಿಡಿಕಾರಿದರು.

ಜನವಿರೋಧಿ, ಸದನ ವಿರೋಧಿ, ಭಯೋತ್ಪಾದಕರ ಹಾಗೂ ಉಗ್ರರ ಪರ ಇರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಫೆ. 27 ಹಾಗೂ ಫೆ.28 ರಂದು ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಂಡಿದೆ. ಹಾಗೆಯೇ ನಮ್ಮ ಜಿಲ್ಲೆಯಲ್ಲೂ ಈ ಹೋರಾಟ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮೀಶ್, ಮೇಯರ್ ಬಿ.ಜಿ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ, ಟೂಡಾ ಅಧ್ಯಕ್ಷ ಬಿ.ಎಸ್.ನಾಗೇಶ್, ವೈ.ಎಚ್.ಹುಚ್ಚಯ್ಯ, ಟಿ.ಆರ್.ಸದಾಶಿವಯ್ಯ, ಕೆ.ಪಿ.ಮಹೇಶ್, ಟಿ.ಎಚ್.ಹನುಮಂತರಾಜು ಮತ್ತಿತರರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net