ಕಾಂಗ್ರೆಸ್‌ಗೆ ಜಿಗಿದ ಸುಧಾಕರ್: ಚರ್ಚೆಗೆ ಗ್ರಾಸವಾದ ಮಾಜಿ ಶಾಸಕನ ನಡೆ

3
Published on

ಚಿಕ್ಕಬಳ್ಳಾಪುರ: ನಿರೀಕ್ಷೆಯಂತೆ ಮಾಜಿ ಶಾಸಕ ಡಾ ಎಂ.ಸಿ.ಸುಧಾಕರ್ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜಕೀಯ ಹೊಸ ಬೆಳವಣಿಗೆಯ ಲೆಕ್ಕಾಚಾರಗಳು ಚರ್ಚೆಗೆ ಗ್ರಾಸವಾಗಿವೆ. ನವದೆಹಲಿಯಲ್ಲಿ ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕೈ ಪಾಳಯ ಸೇರಿಕೊಂಡಿದ್ದಾರೆ. ಇದೇ ವೇಳೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಒಳ ತಂತ್ರಗಾರಿಕೆಯಲ್ಲಿ ಸೋಲಿಸಿದ ಅವಿಭಜಿತ ಕೋಲಾರ ಜಿಲ್ಲೆಯ ಘಟಾನುಘಟಿ ನಾಯಕರ ಉಪಸ್ಥಿತಿಯು ವಿಶೇಷವಾಗಿದೆ.


ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಸುಧಾಕರ್ ಕಾಂಗ್ರೆಸ್ ಸೇರ್ಪಡೆಯಾಗುವುದರ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದವು. ಸ್ವತಃ ಕೆಪಿಸಿಸಿ ಅಧ್ಯಕ್ಷರು ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರನ್ನು ಒಳಗೊಂಡ ಸಭೆಯಲ್ಲಿ ಮಾಜಿ ಶಾಸಕರನ್ನು ಸೇರಿಸಿಕೊಳ್ಳುವುದರ ಚರ್ಚೆ ನಡೆದಿತ್ತು. ಇದರ ಬೆಳವಣಿಗೆಯ ನಂತರ ಕ್ಷೇತ್ರಕ್ಕೆ ಬಂದು ಹಲವು ಸಭೆಗಳನ್ನು ನಡೆಸಿದ ಸುಧಾಕರ್, ನಿರ್ಧಾರ ಕೈಗೊಳ್ಳುವುದರ ಬಗ್ಗೆ ಗ್ರೀನ್ ಸಿಗ್ನಲ್ ಸಹ ಪಡೆದುಕೊಂಡಿದ್ದರು. ಇನ್ನು ರಾಜಕೀಯ ಪಕ್ಷಗಳು ಮುಂಬರುವ ಸ್ಥಳೀಯ ಜಿಪಂ, ತಾಪಂ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಚುನಾವಣೆ ಘೋಷಣೆಯೊಂದೇ ಬಾಕಿ ಇದೆ. ಇದರ ಬೆನ್ನಲ್ಲೇ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬುದು ಕ್ಷೇತ್ರದ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.


ಷರತ್ತುಗಳೊಂದಿಗೆ ಸೇರ್ಪಡೆ?:
ಚಿಂತಾಮಣಿ ಕ್ಷೇತ್ರದ ರಾಜಕೀಯ ವಿಚಾರವಾಗಿ ಅನಗತ್ಯ ಸ್ವಪಕ್ಷೀಯರ ಹಸ್ತಕ್ಷೇಪಕ್ಕೆ ಕಡಿವಾಣ, ಅದರಲ್ಲೂ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಒಡೆದಾಳುವ ನೀತಿಗೆ ಅವಕಾಶ ನೀಡದಿರುವಿಕೆ, ಪಕ್ಷದಲ್ಲಿ ನಿರ್ಧಾರ ಕೈಗೊಳ್ಳುವುದರಲ್ಲಿ ಸ್ವಾತಂತ್ರ್ಯ ಸೇರಿ ನಾನಾ ಷರತ್ತುಗಳೊಂದಿಗೆ ಸುಧಾಕರ್ ಪಕ್ಷ ಸೇರ್ಪಡೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೇ ಹಲವು ಬಾರಿ ಕಾಂಗ್ರೆಸ್ ರಾಜ್ಯ ನಾಯಕರು ಸ್ವಾಗತಿಸಿದರೂ ಷರತ್ತುಗಳನ್ನು ಮುಂದಿಡುತ್ತಿದ್ದರು. ಇನ್ನು ನವದೆಹಲಿಯ ವರಿಷ್ಠರಿಂದ ಭರವಸೆ ಕೊಡಿಸಿದಾಗ ಮಾತ್ರ ಒಪ್ಪಿ ಬರುವುದಾಗಿ ಹೇಳಿದ್ದರು. ಇದರಿಂದಲೇ ರಾಹುಲ್ ಗಾಂಧಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಘೋಷಣೆ ಮಾಡಲಾಗಿದೆ.

ಮುನಿಯಪ್ಪ ಜತೆ ಮುಸುಕಿನ ಗುದ್ದಾಟ: ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಮಾಜಿ ಶಾಸಕ ಡಾ ಎಂ.ಸಿ.ಸುಧಾಕರ್ ನಡುವೆ ಮೊದಲಿನಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಿದೆ. ಹಿಂದೆ ಇಬ್ಬರು ಒಂದೇ ಪಕ್ಷದಲ್ಲಿದ್ದರೂ ಬಹಿರಂಗವಾಗಿ ಪರಸ್ಪರ ಟೀಕಿಸಿಕೊಂಡು ಭಿನ್ನಮತ ಹೊರ ಹಾಕಿದ್ದರು.
ಚಿಂತಾಮಣಿಯಲ್ಲಿ 2004, 2008ರಲ್ಲಿ ಸತತ ಎರಡು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾದ ಸುಧಾಕರ್, ಕೈ ಬೆಂಬಲವಿಲ್ಲದೆ 2013, 2018ರಲ್ಲಿ ಸ್ಪರ್ಧಿಸಿ, ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಇದರ ನಡುವೆ ಕಳೆದ 2019 ಲೋಕಸಭಾ ಚುನಾವಣೆಯಲ್ಲಿ ಬಹಿರಂಗವಾಗಿ ಕೆ.ಎಚ್.ಮುನಿಯಪ್ಪ ವಿರುದ್ಧ ತೊಡೆ ತಟ್ಟಿ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿದ್ದರು.

ಲಾಭದ ಲೆಕ್ಕಾಚಾರ: ಕಳೆದ ಎರಡು ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಧಾಕರ್ ಅತ್ಯಲ್ಪ ಮತಗಳಿಂದ ಸೋಲು ಕಂಡಿದ್ದರು. ಇದಕ್ಕೆ ವೈಯಕ್ತಿಕ ವರ್ಚಸ್ಸು, ಕುಟುಂಬದ ಹಿನ್ನೆಲೆಯ ಪ್ರಭಾವದ ಜತೆಗೆ ರಾಷ್ಟ್ರೀಯ ಪಕ್ಷದ ಬೆಂಬಲ ಹೊಂದಿದ್ದಾಗ ಗೆಲುವು ಸುಲಭವಾಗಿ ಸಿಗಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ. ಇನ್ನು ಮೊದಲಿನಿಂದಲೂ ಜಿಲ್ಲೆಯು ಕಾಂಗ್ರೆಸ್‌ನ ಭದ್ರಕೋಟೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 5 ಕ್ಷೇತ್ರಗಳ ಪೈಕಿ ಕನಿಷ್ಠ 4 ಸ್ಥಾನಗಳನ್ನಾದರೂ ಗೆಲ್ಲಬೇಕೆಂಬ ಗುರಿ ಹೊಂದಲಾಗಿದೆ. ಇದರಲ್ಲಿ ಚಿಂತಾಮಣಿ ಸಹ ಒಂದು. ಇದಕ್ಕೆ ಸುಧಾಕರ್ ಸೇರ್ಪಡೆ ಅನಿವಾರ್ಯ ಎಂಬುದು ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net