

ಬಾಳೆಹೊನ್ನೂರು: ರಾಜ್ಯ ಸರ್ಕಾರದ ಅಧಿಕಾರವಧಿ ಇನ್ನೂ ಮೂರು ವರ್ಷವಿದ್ದು ಅಷ್ಟರೊಳಗೆ ಎಷ್ಟಾಗುತ್ತೋ ಅಷ್ಟು ಲೂಟಿ ಮಾಡೋಣ, ಎಷ್ಟು ಸಾಧ್ಯವೋ ಅಷ್ಟು ಭ್ರಷ್ಟಾಚಾರ ಮಾಡೋಣ, ಆ ಹಣದಲ್ಲಿ ಮುಂದೆ ಚುನಾವಣೆ ಎದುರಿಸೋಣ ಎಂಬುದು ಅವರ ಭಾವನೆಯಾಗಿದೆ ಎಂದು ಅವರ ಕಾರ್ಯವೈಖರಿಯಲ್ಲಿ ಬಹಳ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಹಲಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಇತ್ತೀಚೆಗೆ ಮೈಸೂರಿನಲ್ಲಿ ಕಾಂಗ್ರೆಸ್‌ನವರು ಸಾಧನಾ ಸಮಾವೇಶ ಮಾಡಿದ್ದರು. ಆದರೆ ಅವರು ಎರಡು ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸುತ್ತೇನೆ. 130ಕ್ಕೂ ಅಧಿಕ ಸೀಟುಗಳನ್ನು ಕೊಟ್ಟ ರಾಜ್ಯದ ಜನತೆಗೆ ಎಷ್ಟರಮಟ್ಟಿಗೆ ಅಧಿಕಾರವನ್ನು ಜನರ ಪರವಾಗಿ ಉಪಯೋಗಿಸುವ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರೇ ಉತ್ತರ ಕೊಡಬೇಕೇ ಹೊರತು ಬೇರೆಯವರು ಕೊಡಲು ಸಾಧ್ಯವಿಲ್ಲ ಎಂದರು.
ಮುಖ್ಯಮಂತ್ರಿಗಳು ಐದು ವರ್ಷ ನಾನೇ ಸಿಎಂ, ನಮ್ಮಲ್ಲಿ ಯಾವುದೇ ಒಳ ಒಪ್ಪಂದ ಆಗಿಲ್ಲ ಎಂದು ಹೇಳಿಕೆ ನೀಡುತ್ತಾರೆ. ಆದರೆ ಜನರ ಕಷ್ಟ ಕೇಳಬೇಕಾದ ಸರ್ಕಾರ, ಅಭಿವೃದ್ಧಿಯ ಕಡೆಗೆ ಹೋಗಬೇಕಾದ ಸರ್ಕಾರ ಜನರನ್ನು ಕೈಬಿಟ್ಟಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಭದ್ರ ಮಾಡಿಕೊಳ್ಳುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಸಿಎಂ ಕುರ್ಚಿ ಮೇಲೆ ಡಿಸಿಎಂ ಕಣ್ಣಿಟ್ಟಿದ್ದಾರೆ. ಡಿಸಿಎಂ ಸಿಎಂ ಕುರ್ಚಿಗೆ ಹೋದರೆ ಅವರ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಾರು ಆಕ್ರಮಿಸಿಕೊಳ್ಳಬಹುದು ಎಂದು ಮತ್ತೊಬ್ಬರು ಕಣ್ಣಿಟ್ಟಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್‌ನವರ ಕುರ್ಚಿ ಉಳಿಸಿಕೊಳ್ಳುವ ಜಂಜಾಟದಲ್ಲಿ ಜನ ಬೇಸತ್ತು ಹೋಗಿದ್ದಾರೆ ಎಂದರು.
ಜಿಪಂ, ತಾಪಂ ಚುನಾವಣೆ ನಡೆಸದಿದ್ದಕ್ಕೆ ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಆದರೆ ಕಾಂಗ್ರೆಸ್‌ನವರಿಗೆ ಈ ಚುನಾವಣೆ ನಡೆಸಿದರೆ ಮುಂದೇನಾಗುತ್ತದೆ ಎಂಬ ಆತಂಕದಲ್ಲಿದ್ದಾರೆ. ಹೀಗಾಗಿ ದಿನಾಂಕವನ್ನು ಪ್ರಕಟಗೊಳಿಸಲು ಅವರಿಂದ ಸಾಧ್ಯವಿಲ್ಲ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಮುಖಂಡರಾದ ಕೆ.ಎನ್.ಮರಿಗೌಡ, ಕೆ.ಆರ್.ದೀಪಕ್ ಮರಿಗೌಡ, ರುದ್ರಪ್ಪಗೌಡ, ಕೆ.ಟಿ.ಗೋವಿಂದೇಗೌಡ, ವಿನಯ್ ಕಣಿವೆ, ಅತಿಶಯ್ ಮಾಗುಂಡಿ ಮತ್ತಿತರರಿದ್ದರು.