

ಯಾದಗಿರಿ: ತೀವೃ ಕುತೂಹಲ ಕೆರಳಿಸಿದ್ದ ಇಲ್ಲಿನ ವಾಡರ್್ 14ರಲ್ಲಿ ನಡೆದ ನಗರಸಭೆ ಉಪಚುನಾವಣೆ ಫಲಿತಾಂಶ ಬುಧವಾರ ಹೊರ ಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಫಾತೀಮಾ ಭರ್ಜರಿ ಗೆಲುವು ಸಾಧಿದ್ದಾರೆ.
ಕಳೆದ ವರ್ಷ ನಗರಸಭೆಯ ಜೆಡಿಎಸ್ ಸದಸ್ಯೆ ಅಕಾಲಿಕ ನಿಧನ ಹೊಂದಿದ ಕಾರಣ ತೆರವಾಗಿದ್ದ ವಾರ್ಡ್ 29 ರಂದು ಉಪಚುನಾವಣೆ ನಡೆದಿತ್ತು. ಒಟ್ಟು 1062 ಮತದಾರರು ಮತಚಲಾಯಿಸಿದ್ದರು. ಇದರಲ್ಲಿ ಕಾಂಗ್ರೆಸ್ 727 ಮತಗಳು ಪಡೆದರೆ, ಬಿಜೆಪಿಯ ನಾಸೀಮ್ ವಜೀದಾ 292 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಇನ್ನೂ ಜೆಡಿಎಸ್ ಅಭ್ಯರ್ಥಿ ಹಸೀನಾ ಬೇಗಂ ಕೇವಲ 42 ಮತಗಳನ್ನು ಪಡೆದುಕೊಂಡರು.
ಫಾತೀಮಾ ಅವರು 435 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ನೂತನ ಸದಸ್ಯೆಗೆ ಅಭಿನಂದಿಸಿ ಮಾತನಾಡಿದ ಮಾಜಿ ಎಂಎಲ್ಸಿ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ಜನತೆ ಬಿಜೆಪಿಯ ಆಡಳಿತವನ್ನು ತಿರಸ್ಕರಿಸುತ್ತಿದ್ದಾರೆ ಎಂಬುದಕ್ಕೆ ಈ ಫಲಿತಾಂಶ ತಾಜಾ ಉದಾಹರಣೆ ಎಂದರು.
ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರ್ದಶನ ನಾಯಕ, ಕಾಡಾದ ಮಾಜಿ ಅಧ್ಯಕ್ಷ ಶ್ರೀನಿವಾಸರಡ್ಡಿ ಕಂದಕೂರ, ಜಹೀರ್ ಸಾಬ್, ಸನ್ನಿ (ಪಂಪನಗೌಡ) ಪಾಟೀಲ್,ಮಾಣಿಕರಡ್ಡಿ ಕುರಕುಂದ, ಮರೆಪ್ಪ ಬಿಳ್ಹಾರ, ಬಸ್ಸುಗೌಡ ಪಾಟೀಲ್ ಇದ್ದರು.