

ಎಚ್.ಡಿ.ಕೋಟೆ: ತಾಲೂಕಿನಲ್ಲಿ ದಸಂಸ ಹಾಗೂ ರಾಜ್ಯ ರೈತ ಸಂಘಟನೆಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿರುವುದು ನನಗೆ ಆನೆ ಬಲ ಬಂದಂತೆ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ ಮುಳ್ಳೂರು ಗ್ರಾಮದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು. ತಾಲೂಕಿನಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ ನಡೆದ ಪ್ರಗತಿಯನ್ನು ಕಂಡು ದಲಿತ ಸಂಘರ್ಷ ಸಮಿತಿಯ ಎಲ್ಲ ಬಣಗಳು ಹಾಗೂ ರಾಜ್ಯ ರೈತ ಸಂಘಟನೆಯ ಮುಖಂಡರು ಸ್ವಯಂಪ್ರೇರಿತರಾಗಿ ನನ್ನ ಗೆಲುವಿಗೆ ಸಹಕಾರ ನೀಡುತ್ತಿರುವುದು ನನಗೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಉತ್ತೇಜನ ನೀಡಿದಂತಾಗಿದೆ ಎಂದರು.
ತಾಲೂಕಿನ ಇತಿಹಾಸದಲ್ಲಿ ಎರಡನೇ ಅವಧಿಗೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಲು ಜನರು ನೀಡುತ್ತಿರುವ ಬೆಂಬಲ ತಾಲೂಕಿನ ಜನರು ಅಭಿವೃದ್ಧಿ ಪರ ಇದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಸಿದರು.
ಕಳೆದ ನಲವತ್ತು ಐವತ್ತು ವರ್ಷಗಳಿಂದ ಭೂಮಿ ಮಾಡುತ್ತಿದ್ದ ತಾಲೂಕಿನ ನೂರಾರು ರೈತರಿಗೆ ಸಾಗುವಳಿ ಹಕ್ಕು ಪತ್ರ ಸಿಗದೆ ತುಂಬಾ ತೊಂದರೆ ಅನುಭವಿಸುತ್ತಿದ್ದರು. ನಾನು ಶಾಸಕನಾಗಿ ಆಯ್ಕೆಯಾದ ನಂತರ ಯಾವುದೇ ತಾರತಮ್ಯ ಮಾಡದೆ ಸುಮಾರು 600 ಹೆಚ್ಚು ರೈತರಿಗೆ ಸಾಗುವಳಿ ವಿತರಣೆ ಮಾಡಲು ಕ್ರಮವಹಿಸಿದ್ದೇನೆ. ಅದೇ ರೀತಿ ರೈತರಿಗೆ ಕೃಷಿ ಇಲಾಖೆಯಲ್ಲಿ ಸಿಗಬೇಕಾದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಂಡಿದ್ದೇನೆ. ರಾಜ್ಯದಲ್ಲಿ ವಿರೋಧ ಪಕ್ಷ ಇದ್ದರೂ ಸಹ ನನ್ನ ಇತಿಮಿತಿಯಲ್ಲಿ ರೈತರಿಗೆ ಅನುಕೂಲವಾಗುವ ದಿಕ್ಕಿನಲ್ಲಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ತಾಲೂಕಿನಲ್ಲಿ ರೈತರಿಗೆ ಆಗಬೇಕಾದ ಕೆಲಸ ಕಾರ್ಯಗಳನ್ನು ಮಾಡಲು ನಾನು ಸದಾಕಾಲವೂ ಸಿದ್ಧವಾಗಿರುತ್ತೇನೆ. ಸುಭದ್ರ ಸರ್ಕಾರ ರಚನೆ ಆದರೆ ಮಾತ್ರ ತಾಲೂಕು ಅಭಿವೃದ್ಧಿ ಹೊಂದಲು ಸಾಧ್ಯ. ಹಾಗಾಗಿ ಮತದಾರ ಬಂಧುಗಳು ನನ್ನ ಗೆಲುವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮುಳ್ಳೂರು, ಬೆಣ್ಣೆಗೆರೆ, ಚಾಮಲಾಪುರ, ಮುಳ್ಳೂರು ಹುಂಡಿ, ಕುಂದೂರು, ದಡದಹಳ್ಳಿ, ಕಲ್ಲಂಬಾಳು, ಕಟ್ಟೆ ಹುಣಸೂರು, ನಂಜಿಪುರ, ಲಂಕೆ, ಮನುಗನಹಳ್ಳಿ, ಹುನುಗನಹಳ್ಳಿ, ಹುಣಸಳ್ಳಿ, ಹೂವಿನ ಕೊಳ, ಶಾಂತಿಪುರ, ಮಂಚಳ್ಳಿ, ಕೂಲ್ಯ, ಚಕ್ಕೂರು, ಮುದ್ದನಹಳ್ಳಿ, ಅಡಹಳ್ಳಿ, ಕೆ.ಬೆಳ್ತೂರು, ಕಾಳಿ ಹುಂಡಿ, ಶಂಕಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ತೆರಳಿ ಜನರಲ್ಲಿ ಮತಯಾಚನೆ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕವೀರನಾಯಕ, ಪುರದಕಟ್ಟೆ ಬಸವರಾಜು, ಭಾಗ್ಯ ಲಕ್ಷ್ಮೀ, ಶಂಭುಲಿಂಗನಾಯಕ, ಬಿರ್ವಾಳ್ ಬಸವರಾಜು, ಚಿಕ್ಕಣ್ಣ, ಮುಳ್ಳೂರು ಮಂಜು, ನಾಗನಹಳ್ಳಿ ಪ್ರದೀಪ್, ಲೋಕೇಶ್, ಶ್ಯಾಮ್, ಜಕ್ಕಹಳ್ಳಿ ಮಲ್ಲೇಶ್, ರಾಮನಾಯಕ ಇದ್ದರು.