ಕಾಂಗ್ರೆಸ್ ಹೈಕಮಾಂಡ್ ಗೆ ಹೆದರಿಸಲು ಸಿಎಂ ಸಿದ್ದರಾಮಯ್ಯ ತಂತ್ರ: ವಿ.ಸುನಿಲ್ ಕುಮಾರ್ ತಿರುಗೇಟು

Sunil Kumar
Published on

ಬೆಂಗಳೂರು: ಉಪ ಚುನಾವಣೆಯ ಫಲಿತಾಂಶ ಬರುವುದಕ್ಕಿಂತ ಮುಂಚೆಯೇ ಸೋಲಿನ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ತನ್ನ ಸ್ಥಾನಕ್ಕೆ ಚ್ಯುತಿ ಬರುವ ಭಾವನೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಾಧಿಲಾರಂಭಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಛೇಡಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು,  ‘ನಮ್ಮ ಶಾಸಕರನ್ನು ಬಿಜೆಪಿಯವರು ಖರೀದಿಸುತ್ತಿದ್ದಾರೆ’ ಎಂಬ ಹುಸಿ ಸುಳ್ಳನ್ನು ಹೇಳುತ್ತಿದ್ದು, ಪ್ರತಿಪಕ್ಷದ ಹೆಗಲ ಮೇಲೆ ಬಂದೂಕು ಇಟ್ಟು, ಸ್ವಪಕ್ಷದ ಶಾಸಕರು ಹಾಗೂ ಕಾಂಗ್ರೆಸ್ ಹೈಕಮಾಂಡ್ ಗೆ ಹೆದರಿಸಲು ಸಿಎಂ ಸಿದ್ದರಾಮಯ್ಯ ಹೆಣೆದ ತಂತ್ರವಿದು  ಎಂದು  ಟೀಕಿಸಿದರು.

ಕಾಂಗ್ರೆಸ್ಸಿನ ಬೆಳವಣಿಗೆಗಳು, ನಾಯಕರ ಒಳ ಸಭೆಗಳು ಮುಖ್ಯಮಂತ್ರಿಗಳ ಕುರ್ಚಿಗೆ ಆಪತ್ತು ತರುತ್ತದೆ. ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯನ್ನು ಬದಲಿಸಲಿದೆ. ಬೆಳಗಾವಿಯ ಅಧಿವೇಶನ ಹೊಸ ಮುಖ್ಯಮಂತ್ರಿಯೊಂದಿಗೆ ನಡೆಯಲಿದೆ ಎಂದು ಅನಿಸುತ್ತಿದೆ ಎಂದರು.

ಸಿಎಂ ಸಿದ್ದರಾಮಯ್ಯ ತನ್ನ ಅಧಿಕಾರಾವಧಿಯಲ್ಲಿ ಇಲ್ಲಿ ತನಕ ನೂರು ಸುಳ್ಳು ಹೇಳಿದ್ದು, ಶಾಸಕರಿಗೆ ಆಮಿಷ ನೂರ ಒಂದನೇ ಸುಳ್ಳು ಎಂದು ಅಂದುಕೊಳ್ಳುವೆ. ಆಡಳಿತ ಪಕ್ಷವನ್ನು ಬೆದರಿಸಲು ಪ್ರತಿಪಕ್ಷದ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ಆಡಳಿತ ಪಕ್ಷದ ಶಾಸಕರು, ಹೈಕಮಾಂಡನ್ನು ಹೆದರಿಸುವ ಪ್ರಯತ್ನ ಸಿಎಂ ಹೇಳಿಕೆ ಹಿಂದಿದೆ ಎಂದು ಸುನಿಲ್ ಕುಮಾರ್ ವಿಶ್ಲೇಷಿಸಿದರು.

ಅಪಾಯದ ಅರಿವು

ಮುಡಾ ಅಕ್ರಮ, ವಾಲ್ಮೀಕಿ ನಿಗಮದ ಹಗರಣದಲ್ಲಿ ಶಾಸಕರ ನಡುವಿನ ದೊಡ್ಡ ಪ್ರಮಾಣದ ಅಸಮಾಧಾನಗಳು ಸ್ಫೋಟಗೊಳ್ಳುತ್ತದೆ; ತನ್ನ ಕುರ್ಚಿಗೆ ಅಪಾಯ ಇದೆ ಎಂಬುದನ್ನು ಅರ್ಥ ಮಾಡಿಕೊಂಡು, ಪರೋಕ್ಷವಾಗಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಈ ರೀತಿಯ 50 ಕೋಟಿಯ ಆಫರ್‍ ಗಳನ್ನು ತಮ್ಮ ಶಾಸಕರ ಮೇಲೆ ಹೇಳುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ, ಯಾವುದೇ ಅನುದಾನವಿಲ್ಲದೆ ಅಭಿವೃದ್ಧಿಯ ಚಟುವಟಿಕೆಗಳು ಸಂಪೂರ್ಣ ನಾಶವಾಗಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರೇ ಅಸಮಾಧಾನಗೊಂಡಿದ್ದಾರೆ. ಬೇರೆ ಬೇರೆ ಗುಂಪುಗಳಲ್ಲಿ ಸಭೆ ನಡೆಸುತ್ತಿದ್ದಾರೆ ಎಂಬುದನ್ನು ಸಿಎಂ ಕಚೇರಿ ಗಮನಿಸುತ್ತಿದೆ ಎಂದು ವಿವರಿಸಿದರು.

ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು, ಅನುದಾನ ಕೊಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ತಮ್ಮ ಶಾಸಕರನ್ನೇ ಖರೀದಿ ಮಾಡಿಕೊಳ್ಳುವ ಪರೋಕ್ಷ ಸಂದೇಶವನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ನಾನು ಏನೂ ಕಡಿಮೆ ಇಲ್ಲ ಎಂದು ಉಪ ಮುಖ್ಯಮಂತ್ರಿಗಳೂ ಇದೇ ಸಂದೇಶವನ್ನು ತಮ್ಮ ಶಾಸಕರಿಗೆ ನೀಡಿದ್ದಾರೆ ಎಂದರು.

ಹೈಕಮಾಂಡ್ ಗಡುವು ಸಮೀಪ

ಸಿದ್ದರಾಮಯ್ಯನವರ ಹೈಕಮಾಂಡ್ ಗಡುವು ಮುಕ್ತಾಯವಾಗುತ್ತಿದೆ. ಇದೆಲ್ಲವನ್ನೂ ಅರ್ಥ ಮಾಡಿಕೊಂಡ ಸಿದ್ದರಾಮಯ್ಯ ತಮ್ಮನ್ನು ಮುಟ್ಟಲು ಬರಬೇಡಿ ಎಂಬ ಸಂದೇಶವನ್ನು ಹೈಕಮಾಂಡಿಗೂ ಕೊಡುವ ಪ್ರಯತ್ನ ಮಾಡಿದ್ದಾರೆ.

ಟೀಕೆ ಬಿಜೆಪಿಯವರ ಮೇಲೆ ಆಗಿದ್ದರೂ ಸಂದೇಶ ಶಿವಕುಮಾರ್, ಪರಮೇಶ್ವರ್, ತನ್ನ ಆಪ್ತ ಜಾರಕಿಹೊಳಿ, ಹೈಕಮಾಂಡ್ ಗೆ ರವಾನಿಸುವ ಪ್ರಯತ್ನವನ್ನು ಅವರು ಮಾಡಿರುವಂತಿದೆ ಎಂದು ಕುಟುಕಿದರು.

ಸಿದ್ದರಾಮಯ್ಯ ಅವರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು 50 ಕೋಟಿಯಾದರೂ ಕೊಡಲಿ; ನೂರು ಕೋಟಿಯಾದರೂ ಕೊಡಲಿ; ಆದರೆ, ಈ ರೀತಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹೊಸ ಸಂಪ್ರದಾಯಕ್ಕೆ ಸಿಎಂ ಹೋಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ಮುಸಲ್ಮಾನರಿಗೆ ಮಾತ್ರ ಈ ಸರ್ಕಾರ ?

ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಮೀಸಲಾತಿ ಮೂಲಕ ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದೇ ಇರುವ ಪದ್ಧತಿ, ಕಾನೂನನ್ನು ತರಲು ಸಿಎಂ ಮುಂದಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಒಂದು ಸರ್ವಜನರ ಸರ್ಕಾರ ಇದೆ ಎಂದು ಅನಿಸುವುದರ ಬದಲಾಗಿ, ಕರ್ನಾಟಕದಲ್ಲಿ ಇರುವುದು ಮುಸಲ್ಮಾನರ ಸರ್ಕಾರ; ಮುಸಲ್ಮಾನರಿಗೆ ಮಾತ್ರ ಈ ಸರ್ಕಾರ ಇದೆ ಎಂಬಷ್ಟರ ಮಟ್ಟಿಗೆ ಯೋಜನೆಗಳು, ಯೋಚನೆಗಳು, ಹೇಳಿಕೆಗಳು ಸಿಎಂ ಬಾಯಿಯಿಂದ ಬರುತ್ತಿವೆ ಎಂದು ವಿ.ಸುನಿಲ್ ಕುಮಾರ್ ಟೀಕಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ, ಆಪ್ತ ನಸೀರ್ ಅಹ್ಮದ್ ಸಲ್ಲಿಸಿದ ಮನವಿ ಮೇರೆಗೆ ಸಿಎಂ ಅದರ ಮೇಲೆ ಟಿಪ್ಪಣಿ ಬರೆದು ಕೆಟಿಟಿಪಿ ಕಾಯಿದೆಗೆ ತಿದ್ದುಪಡಿ ಮಾಡಲು ಟಿಪ್ಪಣಿ ಬರೆದುದು ಸುಳ್ಳೇ? ನಿಮ್ಮ ಟಿಪ್ಪಣಿಯ ಮೇಲೆ ಕಾನೂನು ಇಲಾಖೆ ಆಲೋಚಿಸುತ್ತಿರುವುದು ಸುಳ್ಳೇ ಎಂದು ಪ್ರಶ್ನಿಸಿದರು.

ಮೊದಲು ಇದೇ ಮಾದರಿಯ ಯೋಚನೆಗಳನ್ನು ಮಾಡಿ ಸದ್ದಿಲ್ಲದೇ ಆದೇಶ ಮಾಡಿದ್ದೀರಿ. ಅಂಥದ್ದೇ ಸದ್ದಿಲ್ಲದೇ ಆದೇಶ ಮಾಡುವ ಹುನ್ನಾರ ಇವತ್ತು ನಡೆಯುತ್ತಿದೆ. ಇದರಿಂದ ರಾಜ್ಯದಲ್ಲಿ ಅರಾಜಕತೆಗೆ ಮುಖ್ಯಮಂತ್ರಿಗಳೇ ನಾಂದಿ ಹಾಡುವಂತಿದೆ ಎಂದು ವಿ.ಸುನಿಲ್ ಕುಮಾರ್ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net