ಕಾಂಗ್ರೆಸ್ ಸೇರಿದ ಕೆ.ಪಿ.ನಂಜುಂಡಿ

congress logo
Published on

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದ ಮರು ದಿನವೇ ಕೆ.ಪಿ.ನಂಜುಂಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ನಂಜುಂಡಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಸುರ್ಜೆವಾಲ ಮಾತನಾಡಿ, ಹಿಂದುಳಿದ ವರ್ಗದ ನಾಯಕರಾದ ಕೆ.ಜಿ ನಂಜುಂಡಿ ಮನೆಗೆ ಮರಳಿದ್ದಾರೆ. ನಂಜುಂಡಿ ಕೇವಲ ವಿಶ್ವಕರ್ಮ ಸಮಾಜ ಮಾತ್ರವಲ್ಲ ಹಿಂದುಳಿದ ವರ್ಗಗಳ ಧ್ವನಿಯಾಗಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ನನ್ನ ರಾಜಕಾರಣದ ಅನುಭವದಲ್ಲಿ ಸಿದ್ದರಾಮಯ್ಯ ಹೊರತುಪಡಿಸಿದರೆ ಹಿಂದುಳಿದ ವರ್ಗದ ಪೈಕಿ ಕಾಯಕ ಸಮಾಜದಲ್ಲಿ ಸಂಘಟನೆಗೆ ಶಕ್ತಿ ಹೊಂದಿರುವವರು ಎಂದರೆ ಅದು ಕೆ.ಪಿ ನಂಜುಂಡಿ ಎಂದು ಭಾವಿಸಿದ್ದೇನೆ ಎಂದರು.
ಸಂಘಟನೆ ಎಲ್ಲರಿಂದಲೂ ಸಾಧ್ಯವಿಲ್ಲ. ಈಗಿನ ನಾಯಕರುಗಳು ಒನ್ ಮ್ಯಾನ್ ಆರ್ಮಿ ರೀತಿ ಇರುತ್ತಾರೆ. ಆದರೆ ನಂಜುಂಡಿ ಬಹಳ ದೊಡ್ಡ ಪ್ರತಿಭೆ ಎಂದು ಹೇಳಿದರು.
ಕೆ.ಪಿ.ನಂಜುಂಡಿ ಮಾತನಾಡಿ, ಹಿಂದುಳಿದ ವರ್ಗದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬಹುದು ಎಂಬ ನಿರೀಕ್ಷೆಯಿಂದ ನಾನು ಬಿಜೆಪಿಗೆ ಹೋದೆ. ಅವರು ನನ್ನನ್ನು ಎಂಎಲ್ ಸಿ ಮಾಡಿ ಕೂರಿಸಿದರು. ಹಿಂದುಳಿದ ಸಮಾಜದ ಧ್ವನಿಯಾಗುವುದು ನನ್ನ ಉದ್ದೇಶ. ನಮ್ಮಂತಹವರನ್ನು ಕೂರಿಸಿ ಮೂಲೆಗುಂಪು ಮಾಡಬಾರದು. ನಮ್ಮಂತಹವರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು. ಇದರಿಂದ ನಾನು ನೊಂದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net