ಕಾಂಗ್ರೆಸ್ ಸೇರಿದ ಅಕ್ಕಿ

Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕುಂದಗೋಳ ಮಾಜಿ ಶಾಸಕ ಜೆಡಿಎಸ್‌ನ ಎಂ.ಎಸ್.ಅಕ್ಕಿ ಕಾಂಗ್ರೆಸ್ ಸೇಪರ್ಡೆಯಾಗಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಂ.ಎಸ್.ಅಕ್ಕಿ ಹಾಗೂ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಡಿಕೆಶಿ, ಎಂ.ಎಸ್.ಅಕ್ಕಿ ಶಾಸಕರಾಗಿ ನಮ್ಮ ಜತೆ ಕೆಲಸ ಮಾಡಿದ್ದರು. ಈಗ ಯಾವುದೇ ಷರತ್ತಿಲ್ಲದೇ ಪಕ್ಷಕ್ಕೆ ಬಂದಿದ್ದಾರೆ. ತುಂಬಾ ಸಂಭಾವಿತ ವ್ಯಕ್ತಿ. ಅಕ್ಕಿಯವರ ಜತೆ ಜೆಡಿಎಸ್ ತಾಲೂಕು ಅಧ್ಯಕ್ಷ, ಬ್ಲಾಕ್ ಅಧ್ಯಕ್ಷರು, ನೂರಾರು ಕಾರ್ಯಕರ್ತರು ಪಕ್ಷಕ್ಕೆ ಸೇರಿರುವುದರಿಂದ ಆ ಭಾಗದಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬರಲಿದೆ ಎಂದರು.

ಕಾಂಗ್ರೆಸ್ ಸೇರ್ಪಡೆ ಬಳಿಕ ಮಲ್ಲಿಕಾರ್ಜುನ ಅಕ್ಕಿ ಮಾತನಾಡಿ, ನಾನು 87ಕ್ಕೆ ರಾಜಕೀಯಕ್ಕೆ ಬಂದವನು. ಜೆಡಿಎಸ್‌ನಿಂದ ಶಾಸಕನಾಗಿದ್ದೆ. ಇದೀಗ ಕಾಂಗ್ರೆಸ್ ತತ್ವ ಸಿದ್ಧಾಂತಗಳ ನಂಬಿ ಬಂದಿದ್ದೇನೆ ಎಂದರು.

ಬಿಜೆಪಿಯನ್ನು ಎದುರಿಸುವ ಶಕ್ತಿ ಡಿಕೆಶಿಯವರಿಗಿದೆ. ಹಾಗಾಗಿಯೇ ಕಾಂಗ್ರೆಸ್ ಸೇರಿದ್ದೇನೆ. ಸಿದ್ದರಾಮಯ್ಯನವರ ಜತೆಯೂ ಮಾತನಾಡಿದ್ದೇನೆ. ಬಹಳ ಖುಷಿಯಿಂದ ಅವರು ಬೆನ್ನು ತಟ್ಟಿದರು ಎಂದು ಹೇಳಿದರು.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಜೆಡಿಎಸ್ ತೊರೆದು ಪಕ್ಷಕ್ಕೆ ಸೇರ್ಪಡೆಯಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರನಗೌಡ ಹಿರೇಗೌಡ, ಜಿಲ್ಲಾ ರೈತ ಘಟಕದ ಕಾರ್ಯದರ್ಶಿ ಕೃಷ್ಣಗೌಡ ಹನಮಗೌಡ್ರ, ಜಿಲ್ಲಾ ಯುವ ಘಟಕ ಅಧ್ಯಕ್ಷ ನಾರಾಯಣ ಕೆ.ಹೂಗಾರ್, ಕಾರ್ಯದರ್ಶಿ ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಇತರ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net