ಕಾಂಗ್ರೆಸ್ ಕಾರ್ಯಕರ್ತರಿಗೆ ಗೆಲುವಿನ ಶ್ರೇಯಸ್ಸು

22.Pyp.01
ಪಿರಿಯಾಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಕೆ.ವೆಂಕಟೇಶ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿದರು. ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಎಚ್.ಡಿ.ಗಣೇಶ್, ಬಿ.ವಿ.ಜವರೇಗೌಡ, ಕೆ.ಹೊಲದಪ್ಪ, ಬಿ.ಜೆ.ಬಸವರಾಜ್, ಕೆ.ಆರ್.ನಿರೂಪಾ ಇತರರು ಇದ್ದರು.
Published on

ಪಿರಿಯಾಪಟ್ಟಣ: ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಪಕ್ಷದ ಕಾರ್ಯಕರ್ತರ ಗೆಲುವಾಗಿದೆ ಎಂದು ಶಾಸಕ ಕೆ.ವೆಂಕಟೇಶ್ ಹೇಳಿದರು.


ತಾಲೂಕಿನ ನೂತನ ಶಾಸಕರಾಗಿ ಕೆ.ವೆಂಕಟೇಶ್ ಆಯ್ಕೆಯಾದ ಹಿನ್ನೆಲೆಯಲ್ಲಿ ಪಿರಿಯಪಟ್ಟಣ ಕಾಂಗ್ರೆಸ್ ಕಚೇರಿ ಬಳಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.


ಹಿಂದಿನ ಚುನಾವಣೆಗಳಿಗೆ ಹೋಲಿಸಿಕೊಂಡಲ್ಲಿ ಈ ಬಾರಿ ನಡೆದ ಚುನಾವಣೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೂ ಹೋಗಿ ಪಕ್ಷದ ಗ್ಯಾರಂಟಿ ಕಾರ್ಡ್ ಬಗ್ಗೆ ಪ್ರಚುರ ಪಡಿಸುವುದರ ಜತೆಗೆ ಈ ಹಿಂದೆ ತಾಲೂಕಿನಲ್ಲಿ ಆಗಿದ್ದ ಶಾಶ್ವತ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಮತದಾರರಿಗೆ ಮಾಹಿತಿ ನೀಡಿದ್ದಾರೆ ಎಂದು ಶ್ಲಾಘಿಸಿದರು.


ಕೇವಲ ರಸ್ತೆ, ಚರಂಡಿ ನಿರ್ಮಿಸಿದರೆ ತಾಲೂಕಿನ ಅಭಿವೃದ್ಧಿಯಾದಂತೆ ಅಲ್ಲ ಎಂದು ಮಾಜಿ ಶಾಸಕರನ್ನು ಟೀಕಿಸಿದ ವೆಂಕಟೇಶ್, ತಾಲೂಕಿನಲ್ಲಿ ಶಾಶ್ವತ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಪಡಿಸಿದಾಗ ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಟಾಂಗ್ ನೀಡಿದರು. ಪಿರಿಯಾಪಟ್ಟಣ ಪುರಸಭಾ ವ್ಯಾಪ್ತಿಯಲ್ಲಿ ಮೂಲ ಸಮಸ್ಯೆಗಳ ಬಗ್ಗೆ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು.


ಸಚಿವ ಸ್ಥಾನ ದೊರೆಯುವ ವಿಶ್ವಾಸ: ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ಸಚಿವ ಸ್ಥಾನ ದೊರಕುವ ವಿಶ್ವಾಸವಿದೆ ಎಂದು ಕೆ.ವೆಂಕಟೇಶ್ ಹೇಳಿದರು.


ಪಕ್ಷ ಅಧಿಕಾರದಲ್ಲಿ ಇರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸೋತಾಗ ನಾವು ಕುಗ್ಗಿರಲಿಲ್ಲ. ಈಗ ಗೆದ್ದಿರುವಾಗ ನಾವು ಬೀಗುವುದು ಬೇಡ. ನಾವೆಲ್ಲರೂ ಸಂಯಮದಿಂದ ಇದ್ದು ತಾಲೂಕಿನಲ್ಲಿ ಶಾಂತಿ ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.


ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ತಾಲೂಕಿನ ಅಭಿವೃದ್ಧಿಗೆ ಯಾವುದೇ ರೀತಿಯ ಕೊರತೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಮುಖಂಡರಾದ ಎಚ್.ಡಿ.ಗಣೇಶ್, ಬಿ.ವಿ.ಜವರೇಗೌಡ, ಕೆ.ಹೊಲದಪ್ಪ, ಬಿ.ಜೆ.ಬಸವರಾಜ್, ಕೆ.ಆರ್.ನಿರೂಪಾ, ಟಿ.ಈರಯ್ಯ, ಆರ್.ಎಸ್.ಮಹದೇವ್, ಮಾನ್ಸೂನ್ ಚಂದ್ರು, ಪಿ.ಎನ್.ಚಂದ್ರಶೇಖರ್, ಪಿ.ಎಸ್.ಹರೀಶ್, ರಾಮಚಂದ್ರ, ಪಿ.ಮಹದೇವ್, ತಮ್ಮಣ್ಣಯ್ಯ, ಮಾಸ್ಟರ್ ಮೋಹನ್, ಬಿ.ವಿ.ಅನಿತಾ ಎಸ್.ಟಿ.ಸರಸ್ವತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net