

ಬೆಂಗಳೂರು: ಬಿಜೆಪಿಯವರು ಸಂವಿಧಾನ ಸಮ್ಮಾನ ಎನ್ನುವ ಸುಳ್ಳು ಕಾರ್ಯಕ್ರಮ ಆಯೋಜಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಪಾದಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಎಂದಿಗೂ ಅಂಬೇಡ್ಕರ್ ವಿರುದ್ಧ ಇರಲಿಲ್ಲ. ನಾವು ಯಾವುದೇ ಕಾರಣಕ್ಕೂ ಮನುಸ್ಮೃತಿಯನ್ನು ಒಪ್ಪಿಲ್ಲ. ಜತೆಗೆ ಅಂಬೇಡ್ಕರ್ ಅವರನ್ನು ವಿರೋಧಿಸಿಲ್ಲ. ಅಂಬೇಡ್ಕರ್ ಹಾಗೂ ಕಾಂಗ್ರೆಸ್ ನಡುವಿನ ಸಂಬಂಧ ಸಂಕೀರ್ಣವಾದುದು. ಅವರನ್ನು ಈ ಹಿಂದೆ ನಮ್ಮ ಪಕ್ಷವು ಕೆಲವೊಂದು ಸಂದರ್ಭದಲ್ಲಿ ಒಪ್ಪಿದೆ. ಸಾಕಷ್ಟು ಸಂದರ್ಭಗಳಲ್ಲಿ ಅವರನ್ನು ಅಪ್ಪಿಕೊಂಡಿದೆ. ಒಂದೇ ಸಾಲಿನಲ್ಲಿ ಅವರ ಮತ್ತು ಕಾಂಗ್ರೆಸ್ ಸಂಬಂಧವನ್ನು ಬಣ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಮ್ಮ ರಾಜ್ಯದ ಜನ ಬಿಜೆಪಿಯರಿಗೆ ಉಗಿದು ಮನೆಗೆ ಕಳುಹಿಸಿದ್ದಾರೆ. ಆದ ಕಾರಣ ತಮ್ಮ ಮಾನವನ್ನು ಉಳಿಸಿಕೊಳ್ಳಲು ಸುಳ್ಳಿನ ಆಟ ಕಟ್ಟುತ್ತಿದ್ದಾರೆ. ನಾಗ್ಪುರ ವಿಶ್ವವಿದ್ಯಾನಿಲಯದ ಹಳೇ ವಿದ್ಯಾರ್ಥಿಯಾದ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರದಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದರು.
ನಾಗ್ಪುರದಿಂದ ಪಡೆದ ಸುಳ್ಳಿನ ತರಬೇತಿಯನ್ನು ಯಡಿಯೂರಪ್ಪ ಅವರು ಇಲ್ಲಿ ಪ್ರಯೋಗಿಸಿದ್ದಾರೆ. ಅಂಬೇಡ್ಕರ್ ಅವರನ್ನು ದ್ವೇಷ ಮಾಡುವ, ಸಂವಿಧಾನ ದ್ರೋಹಿಗಳು, ವಿರೋಧಿಗಳು ಇಂದು ಸಂವಿಧಾನದ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಂಬೇಡ್ಕರ್ ಅವರು ಜೀವನ ಚರಿತ್ರೆ ಬರೆದ ಅಶೋಕ್ ಗೋಪಾಲ್ ಎನ್ನುವವರು 1952, ಜನವರಿ 18 ನೇ ತಾರೀಕು ಬಾಂಬೆ ಉತ್ತರ ಮೀಸಲಾತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುತ್ತಾರೆ. ಅವರು ಚುನಾವಣೆಯಲ್ಲಿ ಸೋತಾಗ ಅವರ ಪರಾಭವಕ್ಕೆ ಕಾರಣ ಯಾರು ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದ ಅವರು ಆರ್‌ಎಸ್‌ಎಸ್, ಬಿಜೆಪಿಯವರು ಪರಿಶಿಷ್ಟರು ಹಾಗೂ ಆದಿವಾಸಿಗಳ ಬಳಿ ಅಂಬೇಡ್ಕರ್ ನಮ್ಮವರು ಎಂದು ಬಿಂಬಿಸಲು ಹೊರಟಿದೆ. ಜನವರಿ 25, 1927 ನೇ ಇಸವಿಯಲ್ಲಿ ಮನುಸ್ಪೃತಿಯನ್ನು ಸುಟ್ಟಾಗ ಏಕೆ ಇವರುಗಳು ಸುಮ್ಮನಿದ್ದರು. ಬಾಬಾ ಸಾಹೇಬರು ಸನಾತನಿಗಳಾಗಿದ್ದರೆ ಏಕೆ ಮನುಸ್ಪೃತಿ ಸುಡುತ್ತಿದ್ದರು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಶ್ರೀನಿವಾಸಮೂರ್ತಿ, ಬೆಂಗಳೂರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ರಮೇಶ್ ಬಾಬು ಉಪಸ್ಥಿತರಿದ್ದರು.