

ಮುಳಬಾಗಿಲು: ಜಾತ್ಯತೀತ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕಾಂಗ್ರೆಸ್ ಆಡಳಿತ ಅತ್ಯವಶ್ಯಕ. ಈ ನಿಟ್ಟಿನಲ್ಲಿ ಯುವಕರು ಪಕ್ಷದ ಸದಸ್ಯತ್ವ ಪಡೆಯುವ ಮೂಲಕ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದು ಜೈವಿಕ ಇಂಧನ ಮಂಡಳಿ ಮಾಜಿ ಉಪಾಧ್ಯಕ್ಷ ಜಿ.ರಾಮಲಿಂಗರೆಡ್ಡಿ ಹೇಳಿದರು.
ನಗರದ ಸುಂಕು ಬಡಾವಣೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯಾದ್ಯಂತ ಏಕಕಾಲಕ್ಕೆ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಪಕ್ಷದ ವರಿಷ್ಠರು ವರ್ಚುಯಲ್ ಸಭೆ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಪ್ರತಿ ವಿಧಾನಸಭಾ ಕ್ಷೇತ್ರದ ಮಾಹಿತಿ ಕಲೆಹಾಕಿದ್ದಾರೆ. ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದ 270 ಮತಗಟ್ಟೆಗಳಲ್ಲೂ ಕನಿಷ್ಠ 50 ಸದಸ್ಯರನ್ನು ಮಾಡುವ ಮೂಲಕ ಪಕ್ಷದ ಸಂಘಟನೆಗೆ ಬಲ ತುಂಬಬೇಕು ಎಂದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೊಲ್ಲಹಳ್ಳಿ ಜಿ.ಎಸ್.ಜಗದೀಶ್ ಮಾತನಾಡಿ, ಮುಳಬಾಗಿಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 35 ಸಾವಿರ ಸದಸ್ಯತ್ವ ನೋಂದಣಿ ಗುರಿ ಇದ್ದು, ಡಿ.31ರೊಳಗೆ ಪೂರ್ಣಗೊಳಿಸಿ ಕೆಪಿಸಿಸಿಗೆ ಕಳಹಿಸಬೇಕು. ಮುಂಚೂಣಿ ಕಾರ್ಯಕರ್ತ ಕನಿಷ್ಠ 25 ಜನರನ್ನು ಸದಸ್ಯತ್ವ ಮಾಡಿಸಬೇಕು ಎಂದರು.
ಸದಸ್ಯತ್ವ ಅಭಿಯಾನದ ಉಸ್ತುವಾರಿಯಾದ ವಿಶ್ವನಾಥ್, ವೆಂಕಟಾದ್ರಿ, ಕಿಸಾನ್ ಖೇತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೇಲಾಗಾಣಿ ಎಂ.ಸಿ.ಸುಭಾಷ್‌ಚಂದ್ರಗೌಡ, ತಾಲೂಕು ಅಧ್ಯಕ್ಷ ಸದಾಶಿವ, ಎಸ್ಸಿ ಬ್ಲಾಕ್ ಅಧ್ಯಕ್ಷರಾದ ವಿ.ಮಾರಪ್ಪ, ಕಾರ್ಗಿಲ್ ವೆಂಕಟೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಮ್ಮ, ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ವೇಣುಕುಮಾರ್, ಸೋಶಿಯಲ್ ಮೀಡಿಯಾ ಅಧ್ಯಕ್ಷ ಗುಮ್ಮಕಲ್ ಮಂಜು, ನಾಚಗುಂಡ್ಲಹಳ್ಳಿ ಸಂತೋಷ್ ಇತರರಿದ್ದರು.