

ಅಥಣಿ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನದ ಚುನಾವಣೆಯ ಮತದಾನ ಭಾನುವಾರ ಸ್ಥಳೀಯ ಶಿವಯೋಗಿ ನಗರದ ಮಿನಿವಿಧಾನ ಸೌಧದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಸುಗಮವಾಗಿ ಜರುಗಿತು.
ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಹಿರಿಯರಾದ ಅರುಣ ಯಲಗುದ್ರಿ, ಶಂಭುಲಿಂಗ ಮಮದಾಪುರ, ಎಂ.ಡಿ.ತೊದಲಬಾಗಿ, ಡಾ.ಎಂ.ಜಿ.ಹಂಜಿ, ಶ್ರೀಶೈಲ ಸಂಕ, ಶಿವಪುತ್ರ ಯಾದವಾಡ, ಮುರುಗೇಶ ಬಾನಿ, ಆನಂದ ಟೊನಪಿ ಇತರರು ಮತಗಟ್ಟೆಗೆ ತೆರಳಿ ಮತಚಲಾಯಿಸಿದರು.
ಅಥಣಿ ತಾಲೂಕಿನಾದ್ಯಂತ 818 ಮತದಾರರಿಗದ್ದು, ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 4 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಥಣಿ ತಾಲೂಕಿನಲ್ಲಿ 317 ಮತದಾರರು ಮತ ಚಲಾಯಿಸಿದ್ದಾರೆ. ಅದರಲ್ಲಿ ಪುರುಷರು-260 ಮತ್ತು 57 ಮಹಿಳೆಯರು ಮತದಾನ ಮಾಡಿದ್ದಾರೆ.
ಶ್ರೀಗಳ ಹೆಸರು ಮಾಯ: ಮತದಾರ ಪಟ್ಟಿಯಲ್ಲಿ ಹೆಸರಿಲ್ಲದ್ದರಿಂದ ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮತಗಟ್ಟೆಯಿಂದ ಮರಳಿದರು. ಅತ್ಯಂತ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿದ್ದ ಅವರು, ಮತದಾನ ಪಟ್ಟಿಯಲ್ಲಿ ಹೆಸರು ಇಲ್ಲದ್ದರಿಂದ ನಿರಾಸೆಯಿಂದ ಮರಳಿದರು.
ರಾಯಬಾಗ ತಾಲೂಕಿನಲ್ಲಿ ನೀರಸ: ರಾಯಬಾಗ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾನುವಾರ ಜರುಗಿದ ಮತದಾನಕ್ಕೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತೆರೆದಿದ್ದ ಮತದಾನ ಕೇಂದ್ರದಲ್ಲಿ 203 ಜನ ಹಕ್ಕು ಚಲಾಯಿಸಿದರು. ತಾಲೂಕಿನಲ್ಲಿ ಒಟ್ಟು 969 ಕಸಾಪ ಮತದಾರರಿದ್ದು, ಪ್ರಚಾರದ ಕೊರತೆ ಹಾಗೂ ಮತದಾರರ ನಿರಾಸಕ್ತಿಯಿಂದ ಮತದಾನ ಪ್ರಮಾಣ ಕಡಿಮೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂತು.
ಚುನಾವಣಾಧಿಕಾರಿಯಾಗಿ ಬಿ.ವೈ.ಮಾನೆ ಕರ್ತವ್ಯ ನಿರ್ವಹಿಸಿದರು, ಪಿಒ ಆಗಿ ಮಹಾಂತೇಶ ಭಜಂತ್ರಿ, ಸಂತೋಷ ಬಸನಾಯ್ಕ, ರಾಜೇಂದ್ರ ಕಾಂಬಳೆ ಕಾರ್ಯನಿರ್ವಹಿಸಿದರು. ಹಾರೂಗೇರಿ ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ, ಚಿತ್ರ ಕಲಾವಿದ ದಂಪತಿ ಬಾಬುರಾವ ನಡೋಣಿ, ವಕೀಲ ಸುಧೀರ ಕಳ್ಳೆ ಸೇರಿ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಮತಚಲಾಯಿಸಿದರು.