ಕಸ ವಿಂಗಡಿಸಿ ನೀಡಿ ಪರಿಸರ ಸಂರಕ್ಷಿಸಿ

12 bannur 1
Published on

ಬನ್ನೂರು: ಪ್ರತಿಯೊಬ್ಬರೂ ತಮ್ಮ ವ್ಯಾಪ್ತಿಯಲ್ಲಿ ಬರುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಣೆ ಮಾಡಿ ನೀಡುವುದರಿಂದ ಪರಿಸರ ಸಂರಕ್ಷಣೆ ಮಾಡಿದಂತೆ ಆಗುತ್ತದೆ ಎಂದು ಬನ್ನೂರು ಸ್ವಚ್ಛ ಭಾರತ್ ಅಭಿಯಾನದ ರಾಯಭಾರಿ ಡಾ.ಮಹೇಂದ್ರಸಿಂಗ್ ಕಾಳಪ್ಪ ತಿಳಿಸಿದರು.


ಪಟ್ಟಣದಲ್ಲಿ ಪುರಸಭೆ ಕಾರ್ಯಾಲಯದ ವತಿಯಿಂದ ಸೋಮವಾರ ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತ್ಯಾಜ್ಯ ವಿಂಗಡಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತ್ಯಾಜ್ಯ ವಿಂಗಡನೆಗೆ ಬಗ್ಗೆ ಅರಿವು ಮೂಡಿಸುತ್ತ ಅವರು ಮಾತನಾಡಿದರು.


ಪ್ರತಿ ಮನೆಯಲ್ಲಿ ಬರುವ ಕಸವನ್ನು ಮೂಲದಲ್ಲಿಯೇ ಹಸಿಕಸ, ಒಣಕಸ ಎಂದು ವಿಂಗಡಿಸಿ ನೀಡುವುದರಿಂದ ಹಸಿ ಕಸದಿಂದ ಗೊಬ್ಬರ ತಯಾರಿಕೆ ಮಾಡಬಹುದು. ಇದರಿಂದ ತ್ಯಾಜ್ಯವನ್ನು ಕಡಿಮೆ ಮಾಡಿದಂತೆ ಆಗುವುದಲ್ಲದೆ, ಅದನ್ನು ಮರುಬಳಕೆ ಮಾಡಿ ಪರಿಸರ ರಕ್ಷಣೆ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು.


ಮಕ್ಕಳು ಈ ಬಗ್ಗೆ ತಿಳಿದು ಅದನ್ನು ಪಾಲಕರಿಗೆ ತಿಳಿಸುವ ಮೂಲಕ ಬದಲಾವಣೆ ತರಬೇಕಿದೆ. ಎಲ್ಲೆಂದರಲ್ಲಿ ಕಸವನ್ನು ಹರಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೆ, ಪ್ರಕೃತಿ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದರು.


ಪರಿಸರ ಇಂಜಿನಿಯರ್ ನಸೀಮಾ ಅಜುಂ ಮಾತನಾಡಿ, ತ್ಯಾಜ್ಯ ವಿಂಗಡಣೆ ಪ್ರತಿಯೊಂದು ಮನೆಯಲ್ಲಿಯೂ ಆಗಬೇಕು. ಕಸವನ್ನು ವಿಂಗಡಿಸಿ ನೀಡುವಂತೆ ತಿಳಿಸಿದರು.


ಬನ್ನೂರು ಸ್ವಚ್ಚ ಭಾರತ್ ಅಭಿಯಾನದ ರಾಯಭಾರಿ ಹಿರಿಯ ಆರೋಗ್ಯ ನಿರೀಕ್ಷಕ ಹರಿಪ್ರಸಾದ್, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರೇಮಾ, ರಾಮಚಂದ್ರು, ಕೃಷ್ಣೇಗೌಡ, ಮುರಳಿಗೋಪಾಲ್, ನಂಜುಂಡಸ್ವಾಮಿ, ಡಾ.ರಾಜೀವ್, ರೋಟರಿ ಶಾಲೆಯ ಶಿಕ್ಷಕರು, ಸದಸ್ಯರು, ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net