

ಸೋರಲಮಾವು ಶ್ರೀಹರ್ಷ ತುಮಕೂರು
ಕರೊನಾ ಸಂದರ್ಭದಲ್ಲಿನ ಎರಡು ವರ್ಷದ ಕಲಿಕಾ ನಷ್ಟವನ್ನು ಸರಿದೂಗಿಸುವ ಉದ್ದೇಶದಿಂದಲೇ ಕಲಿಕಾ ಅಂತರ ಸರಿಪಡಿಸಲು ರೂಪಿಸಿದ್ದ "ಕಲಿಕಾ ಚೇತರಿಕೆ ವರ್ಷ' ಪಠ್ಯಪುಸ್ತಕದ ಗಲಾಟೆಯಲ್ಲಿ ಕಳೆದು ಹೋಗಿದೆ.
ತುಮಕೂರಿನ ಎಂಪ್ರೆಸ್ ಶಾಲೆಯ ಆವರಣದಲ್ಲಿ ಮೇ 16ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರೂ ಈವರೆಗೂ ಒಬ್ಬ ವಿದ್ಯಾರ್ಥಿಗೆ ಕಲಿಕೆ ಆಗಿಲ್ಲ.
ಕರೊನಾದಿಂದಾಗಿ ಶಾಲೆಗಳಲ್ಲಿ ಭೌತಿಕವಾಗಿ ತರಗತಿಗಳು ನಿರಂತರವಾಗಿ ನಡೆಯದ ಕಾರಣ ಪಠ್ಯಕ್ರಮ ಹಿಂದುಳಿದಿದ್ದು, ಶಾಲೆಯಲ್ಲಿ ಶಿಕ್ಷಣ ಕಲಿಯುವ ವಾತಾವರಣ ಮತ್ತೆ ಮೂಡಲಿ ಎಂದು ರೂಪಿಸಿರುವ ಕಾರ್ಯಕ್ರಮ ಇನ್ನೂ ಆರಂಭವಾಗದೇ ಇರುವುದು ಆಶ್ಚರ್ಯ ಮೂಡಿಸಿದೆ.
ವಿಶೇಷ ಪಠ್ಯ ಕ್ರಮದ ಮೂಲಕ 2 ವರ್ಷದಿಂದ ಕಲಿಯದ್ದನ್ನು ಕಲಿಸಿ, ಭದ್ರ ಶೈಕ್ಷಣಿಕ ಬುನಾದಿ ಹಾಕುವುದೇ ಈ ಕಾರ್ಯಕ್ರಮದ ವಿಶೇಷತೆಯಾಗಿದ್ದರೂ ಶಿಕ್ಷಣ ಇಲಾಖೆ ಕಾರ್ಯಕ್ರಮಕ್ಕೆ ಅಗತ್ಯವಾದ ಕಲಿಕಾ ಸಾಮಗ್ರಿ ನೀಡದಿರುವುದು ನೆಪಮಾತ್ರಕ್ಕೆ ಉದ್ಘಾಟನೆ ಮಾಡಿದಂತಾಗಿದೆ.
ಜಿಲ್ಲೆಯಲ್ಲಿ 507, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 287 ಪ್ರೌಢಶಾಲೆಗಳಿದ್ದು, ಎಲ್ಲಿಯೂ ಮಕ್ಕಳಿಗೆ ತರಗತಿಯಲ್ಲಿ ನಡೆಯುವ ಚಟುವಟಿಕೆಯಲ್ಲಿ ಭಾಗವಹಿಸಲು ಕಲಿಕಾ ಹಾಳೆಗಲೇ ಸರಬರಾಜು ಆಗಿಲ್ಲ. ಶಿಕ್ಷಕರು ಮಾತ್ರ ತರಬೇತಿ ಪಡೆದು ಸುಮ್ಮನಾಗಿದ್ದಾರೆ.
ಕಲಿಕಾ ಹಾಳೆಗಳಿಲ್ಲದೆ ಕಲಿಯೋದಾದ್ರು ಹೇಗೆ? ಮಕ್ಕಳ ಕಲಿಕಾ ಅಂತರ ನಿವಾರಿಸಿ ಕಲಿಸಲು ರಾಜ್ಯ ಸರ್ಕಾರ "ಕಲಿಕಾ ಚೇತರಿಕೆ' ಉಪಕ್ರಮವನ್ನೂ ರೂಪಿಸಿದೆ. ಈ ಬಗ್ಗೆ ಈಗಾಗಲೇ ಶಿಕ್ಷಕರಿಗೆ ಕೈಪಿಡಿ ರೂಪಿಸಿ, ತರಬೇತಿ ಕೂಡ ನೀಡಲಾಗಿದೆ. ಮಕ್ಕಳ ಕಲಿಕಾ ಹಾಳೆಗಳು ಇಟ್ಟುಕೊಂಡು ಚಟುವಟಿಕೆಯಲ್ಲಿ ಭಾಗವಹಿಸಬೇಕಿದೆ.
"ಕಲಿಕಾ ಚೇತರಿಕೆ' ಕಾರ್ಯಕ್ರಮ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ, ಮಕ್ಕಳಿಗೆ ಅಗತ್ಯವಿರುವ ಕಲಿಕಾ ಹಾಳೆ ಇನ್ನೂ ಬಂದಿಲ್ಲ. ಹಾಗಾಗಿ, ಇನ್ನೂ ಸಾಕಷ್ಟು ಕಾಲಾವಕಾಶವಿದ್ದು ಕಾರ್ಯಕ್ರಮ ಮುಂದುವರಿಯಲಿದೆ. > ಸಿ.ನಂಜಯ್ಯ ಡಿಡಿಪಿಐ, ತುಮಕೂರು ಶೈಕ್ಷಣಿಕ ಜಿಲ್ಲೆ.
ವರ್ಷವಿಡೀ ನಡೆಯುವ ಕಾರ್ಯಕ್ರಮ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮೀೆಯ ಪ್ರಕಾರ ಕರೊನಾ ಕಾಲದ 2 ವರ್ಷಗಳಲ್ಲಿ ಶಿಕ್ಷಣ ೇತ್ರಕ್ಕೆ ಹೆಚ್ಚು ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮ ನನೆಗುದಿಗೆ ಬಿದ್ದಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗಿದೆ. ರಜಾ ಅವಧಿ ಕಡಿತಗೊಳಿಸಿ, ಮಕ್ಕಳಲ್ಲಿ ಕಲಿಕಾ ಚೇತರಿಕೆ ಹೆಚ್ಚಿಸಬೇಕು ಎಂಬ ಇಲಾಖೆಯ ಆಶಯಕ್ಕೆ ವರ್ಷವಿಡೀ ನಡೆಯುವ ಕಾರ್ಯಕ್ರಮಕ್ಕೆ ಎಲ್ಲ ಶಿಕ್ಷಕರು ಕೈ ಜೋಡಿಸಿದ್ದರೂ ಇನ್ನೂ ಕಾರ್ಯಕ್ರಮವೇ ಟೇಕ್ಆಫ್ ಆಗಿಲ್ಲ.
ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಸರ್ಕಾರ ಪ್ರಚಾರಕಷ್ಟೇ ಬಳಸಿಕೊಂಡಿದೆ, ಈ ಕಾರ್ಯಕ್ರಮ ಕಲಿಕಾ ಹಾಳೆ ಮೂಲಕ ನಡೆಯಬೇಕಿದ್ದು ಈವರೆಗೂ ಸರಬರಾಜು ಆಗಿಲ್ಲ. ವರ್ಕ್ಬುಕ್ ಪೂರೈಸಲಾಗದೆ ಮಳೆಬಿಲ್ಲು ಎಂಬ ಕಾರ್ಯಕ್ರಮ ಮಾಡಿಸಿದರು, ಅದೂ ಈಗ ಮುಗಿದಿದೆ. > ಹೆಸರು ಹೇಳಲು ಇಚ್ಛಿಸದ ಶಿಕ್ಷಕಿ ಶಿರಾ