ಗದಗ: ಕಳಸಾ ಬಂಡೂರಿ ಯೋಜನೆ ಕಾಮಗಾರಿಯನ್ನು ಶೀಘ್ರ ಆರಂಭಿಸದಿದ್ದರೆ 1981ರ ಹೋರಾಟ ದಿನಗಳು ಮತ್ತೆ ಮರುಕಳಿಸುವುದರಲ್ಲಿ ಅನುಮಾನವಿಲ್ಲ. ನೀರಿಗಾಗಿ ಎರಡನೇ ಹಂತದ ಹೋರಾಟಕ್ಕೆ ನಾವೆಲ್ಲರೂ ಸಿದ್ದರಾಗಬೇಕು ಎಂದು ಕಳಸಾಬಂಡೂರಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ವಸಂತ ಪಡಗದ ಹೇಳಿದರು. ನರಗುಂದದಲ್ಲಿ 42ನೇ ರೈತ ಹುತಾತ್ಮ ದಿನದ ಅಂಗವಾಗಿ ಗುರುವಾರ ಚಿಕ್ಕನರಗುಂದ ಗ್ರಾಮದ ಹುತಾತ್ಮ ರೈತ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಅವರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಕಳಸಾಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಕಳಸಾ ಬಂಡೂರಿ, ಮಹದಾಯಿ ನೀರಿಗಾಗಿ ಎರಡನೇ ಹಂತದ ಹೋರಾಟಕ್ಕೆ ಅನಿವಾರ್ಯ. ಹೋರಾಟದ ರೂಪುರೇಷೆ ಕುರಿತು ರೈತರೊಂದಿಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಆನಂದ ಗವಳಿ, ರವಿ ಜಂತ್ಲಿ, ಆನಂದ ತೊಂಡಿಹಾಳ, ವಿಜಯ ಕೊಟ್ನಿ, ಸಚಿನ ಶಿರೂರ, ಬಾಪುಗೌಡ ಹಿರೇಗೌಡ್ರ, ರುದ್ರಗೌಡ ರಾಚನಗೌಡ್ರ, ಗೋವಿಂದರೆಡ್ಡಿ ತಿಮ್ಮರೆಡ್ಡಿ, ಅಶೋಕ ಜ್ಞಾನೋಪಂತ, ವಿಠ್ಠಲ ತಿಮ್ಮರೆಡ್ಡಿ, ನಾಗರಾಜ ಹುಲಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ ಮತ್ತಿತರರು ಉಪಸ್ಥಿತರಿದ್ದರು. ಕಳೆದ ಎರಡು ವರ್ಷಗಳಿಂದ ಕೋವಿಡ್ ಹೆಸರು ಹೇಳಿ ಕಾಲಹರಣ ಮಾಡಿದೆ. ಈಗಲಾದರೂ ಸರ್ಕಾರ ಕಳಸಾಬಂಡೂರಿ, ಮಹದಾಯಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಜನರಿಗೆ ನೀರಿನ ಸೌಲಭ್ಯ ಒದಗಿಸದಿದ್ದರೆ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ, ವಸಂತ ಪಡಗದ, ಜಿಲ್ಲಾ ಅಧ್ಯಕ್ಷ ಕಳಸಾ ಬಂಡೂರಿ ಹೋರಾಟ ಸಮಿತಿ ಗದಗ