ಕಲ್ಲುಕ್ವಾರೆ ವಿರುದ್ಧ ಅಪಪ್ರಚಾರ

14sgr1 suresh
Published on

ಸಾಗರ: ಯಾರೋ ಕೆಲವರು ಮಾಡುತ್ತಿರುವ ಅಪಪ್ರಚಾರದಿಂದ ಕಾನೂನುಬದ್ಧವಾಗಿ ಮಾಡುತ್ತಿದ್ದ ಕಲ್ಲುಕ್ವಾರೆ ಚಟುವಟಿಕೆಗಳು ನಿಂತಿದ್ದು ಅದನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಲ್ಲುಕ್ವಾರೆ ಹಿತರಕ್ಷಣಾ ಸಮಿತಿಯ ಸುರೇಶಕುಮಾರ್ ತಿಳಿಸಿದರು.

ಕಲ್ಲುಕ್ವಾರೆ ನಡೆಸುತ್ತಿರುವ, ಅದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ನಾವುಗಳು ಕಲ್ಲುಕ್ವಾರೆ ಏಕಾಏಕಿ ಅಧಿಕಾರಿಗಳು ನಿಲ್ಲಿಸಿದ್ದರಿಂದ ಹೊಟ್ಟೆಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆಲವರು ಕಲ್ಲುಕ್ವಾರೆ ವಿರುದ್ಧ ಅಪಪ್ರಚಾರ ಮಾಡಲು ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರತಿನಿಧಿಗಳಿಗೆ, ಪೊಲೀಸರಿಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಮೂಲಿ ಕೊಡುತ್ತಾರೆ ಎಂದು ಸುಳ್ಳುಸುದ್ದಿ ಹಬ್ಬಿಸಿದ್ದಾರೆ. ಇದರಿಂದ ಅಧಿಕಾರಿಗಳು ನಮಗೆ ತೊಂದರೆ ಕೊಡುತ್ತಿದ್ದಾರೆ. ನಾವ್ಯಾರು ಹಣವನ್ನು ಕೊಡುತ್ತಿಲ್ಲ. ಅಧಿಕಾರಿಗಳು ಬಂದು ನಮ್ಮ ಬಳಿ ಹಣಕ್ಕಾಗಿ ಪೀಡಿಸುತ್ತಿಲ್ಲ. ನಾವು ತಲತಲಾಂತರದಿಅದ ಕಲ್ಲು ಕೀಳುವ, ಸಾಗಿಸುವ, ಮಾರಾಟ ಮಾಡುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಇದು ನಮ್ಮ ಜೀವನಕ್ಕೆ ಆಧಾರವೂ ಹೌದು. ಯಾರಿಗೂ ಲಂಚ ಕೊಡುವ ಸ್ಥಿತಿಯಲ್ಲಿ ನಾವಿಲ್ಲ. ಅಧಿಕಾರಿಗಳು ಅಪಪ್ರಚಾರಕ್ಕೆ ಮನ್ನಣೆ ನೀಡಬಾರದು ಎಂದು ಮನವಿ ಮಾಡಿದರು.

ಸಮಿತಿಯ ಪ್ರಮುಖ ಅರುಣಕುಮಾರ್ ಮಾತನಾಡಿ, ಆನಂದಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ತಲತಲಾಂತರದಿಅದ ಕಲ್ಲುಕ್ವಾರೆ ನಡೆಯುತ್ತಿದೆ. ಮಹಂತಿನ ಮಠ, ಕೋಟೆ ಇನ್ನಿತರೆಗಳನ್ನು ಜಂಬಿಟ್ಟಿಗೆ ಕಲ್ಲಿನಿಂದ ಕಟ್ಟಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಲಂಚ ಕೊಟ್ಟು ಕಲ್ಲು ಕ್ವಾರೆ ನಡೆಸುವ ಸ್ಥಿತಿಯಲ್ಲಿ ನಾವ್ಯಾರು ಇಲ್ಲ. ನೂರಾರು ಕುಟುಂಬಗಳು ಕಲ್ಲುಕ್ವಾರೆಯಿಂದ ಬರುವ ಆದಾಯ ಅವಲಂಬಿಸಿಕೊಂಡು ಬದುಕು ನಡೆಸುತ್ತಿದೆ. ಕಳೆದ ಆರು ತಿಂಗಳಿನಿಂದ ಕೆಲವರು ಮಾಡುವ ಅಪಪ್ರಚಾರಕ್ಕೆ ಅಧಿಕಾರಿಗಳು ಕಲ್ಲುಕ್ವಾರೆಗಳನ್ನು ನಿಲ್ಲಿಸಿದ್ದಾರೆ. ಇದರಿಂದ ನಾವು ಆದಾಯ ಇಲ್ಲದೆ ವಿಷ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಅಪಪ್ರಚಾರಗಳಿಗೆ ಕಿವಿಗೊಡದೆ ನಮಗೆ ಹಿಂದಿನಂತೆ ಕಲ್ಲುಕ್ವಾರೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ನಾಗೇಶ್, ರವಿ, ಇಬ್ರಾಹಿಂ, ಚಂದ್ರು, ಶಿವರಾಜ್, ನಾಗರಾಜ್, ರಾಜು, ರಫೀಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net