ಕಲ್ಯಾಣ ಕರ್ನಾಟಕದ ಅತಿದೊಡ್ಡ ವಸ್ತು ಪ್ರದರ್ಶನ, ಮಾರಾಟ ಮೇಳ ನಾಳೆಯಿಂದ

IMG-20220914-WA0046
Published on

ಕಲಬುರಗಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ಕೆ.ಕೆ.ಆರ್.ಡಿ.ಬಿ., ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಎನ್.ವಿ.ಮೈದಾನದಲ್ಲಿ ಸೆ.15 ರಿಂದ 17ರ ವರೆಗೆ ಕಲ್ಯಾಣ ಕರ್ನಾಟಕದ ಅತಿದೊಡ್ಡ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.

ಕಲ್ಯಾಣ‌ ಕರ್ನಾಟಕ ಭಾಗದ ಆಯಾ ಜಿಲ್ಲೆಗಳ ಭೌಗೋಳಿಕ ಮತ್ತು ಸ್ಥಳೀಯವಾಗಿ ಮಹತ್ವ ಪಡೆದಿರುವ ವಸ್ತುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದ್ದು, ಪ್ರತಿ ದಿನ‌ಮಾರಾಟ ಮೇಳವು ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆ ವರೆಗೆ ತೆರೆಯಲಿದೆ. ಸರ್ಕಾರಿ ಮತ್ತು ಖಾಸಗಿಯ ಸುಮಾರು 200ಕ್ಕೂ ಹೆಚ್ಚು ಮಳಿಗೆಗಳು ಹಾಕಲಾಗುತ್ತಿದೆ. ವಸ್ತುಗಳು, ಉತ್ಪನ್ನಗಳನ್ನು ಖರೀದಿಸುವ ಮೂಲಕ ಸ್ಥಳೀಯ ಉದ್ಯಮದಾರರಿಗೆ, ಸಣ್ಣ‌ ಕೈಗಾರಿಕೆಗಳಿಗೆ, ಸ್ವ-ಸಹಾಯ ಮಹಿಳಾ ಗುಂಪುಗಳಿಗೆ ಪ್ರೋತ್ಸಾಹಿಸಬೇಕು ಎಂದು ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.

ಮೂರು ದಿನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ, ರಾಯಚೂರು, ಯಾದಗಿರಿ, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಕೈಗಾರಿಕೆಗಳು, ಸಂಘ-ಸಂಸ್ಥೆಗಳು, ಮಹಿಳಾ ಸ್ವ-ಸಹಾಯ ಗುಂಪುಗಳು, ಗುಡಿ ಕೈಗಾರಿಕೆಗಳು, ಗೃಹ ಉದ್ಯಮಗಳು, ಕುಶಲಕರ್ಮಿಗಳು ಸ್ಥಳೀಯವಾಗಿ ಉತ್ಪಾದಿಸಲಾಗುವ ಗೃಹ ಉತ್ಪನ್ನ, ಗುಡಿ ಕೈಗಾರಿಕೆ ವಸ್ತುಗಳು, ಕರಕುಶಲ ವಸ್ತುಗಳು, ವಿವಿಧ ಸಮುದಾಯಗಳು ತಯ್ಯಾರಿಸಿರುವ ಕುಲಕಸುಬಿನ ವಸ್ತುಗಳ ಮಾರಾಟ ಮಾಡುವ ಸುವರ್ಣಾವಕಾಶ ಕಲ್ಪಿಸಲಾಗಿದೆ.

ಇದಲ್ಲದೆ ಸರ್ಕಾರ‌ ವಿವಿಧ ಇಲಾಖೆಗಳ ಮಳಿಗೆ ಸಹ ಇರಲಿದ್ದು. ಇಲ್ಲಿ ಆಯಾ ಇಲಾಖೆಗಳ ಜನಪರ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ.

ವಸ್ತು ಪ್ರದರ್ಶನ ವೀಕ್ಷಿಸಿ, ಖರೀದಿಸಲು‌ ಮನವಿ:

ಸುಮಾರು‌ 200ಕ್ಕೂ ಹೆಚ್ಚಿನ‌ ಮಳಿಗೆಗಳು ಒಂದೆಡೆ‌ ಇದ್ದು, ವಿಭಿನ್ನ ವಸ್ತುಗಳ ಪ್ರದರ್ಶನ ಮತ್ತು ಮಾರಾಟ‌ಕ್ಕೆ ಇದು ವೇದಿಕೆಯಾಗಲಿದೆ. ಕೋಟ್ಯಾಂತರ ರೂ. ವಹಿವಾಟು ಅಂದಾಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಸ್ತು ಪ್ರದರ್ಶನ ವೀಕ್ಷಿಸಿ ಖರೀದಿಸುವ ಮೂಲಕ ಸ್ಥಳೀಯರಿಗೆ ಪ್ರೋತ್ಸಾಹಿಸಬೇಕು ಎಂದು ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net