

ಮಾಗಡಿ: ತೀವ್ರ ಕುತೂಹಲ ಕೆರಳಿಸಿದ್ದ ಕಲ್ಯಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚಂದ್ರಕಲಾ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ.
ಹದಿನೈದು ಸದಸ್ಯ ಬಲ ಪಂಚಾಯಿತಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ಎದುರಾಗಿತ್ತು. ಚಂದ್ರಕಲಾ ಅವರು 8 ಮತ ಪಡೆದು ಒಂದು ಮತದ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಲಕ್ಷ್ಮೀದೇವಿ ವಿರುದ್ಧ ಗೆಲುವು ಸಾಧಿಸಿದರು. ಈ ಲಿತಾಂಶದ ಮೂಲಕ ಕಲ್ಯಾ ಗ್ರಾಪಂ ಕಾಂಗ್ರೆಸ್ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಯಿತು.
ಚುನಾವಣಾಧಿಕಾರಿಯಾಗಿ ಕುಮಾರಸ್ವಾಮಿ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷೆ ಚಂದ್ರಕಲಾ ಮಾತನಾಡಿ, ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆ, ಅಭಿವೃದ್ಧಿಗೆ ಮೊದಲ ಆದ್ಯತೆ ಎಂದರು.
ಒಕ್ಕಲಿಗ ಸಂಘದ ನಿರ್ದೇಶಕ ಎಚ್.ಎನ್.ಅಶೋಕ್, ದಿಶಾ ಸಮಿತಿ ಸದಸ್ಯ ಜೆ.ಪಿ. ಚಂದ್ರೇಗೌಡ ಮಾತನಾಡಿದರು.
ನಿರಾಸೆ: ಕಲ್ಯಾ ಪಂಚಾಯಿತಿಯಲ್ಲಿ ಈ ಬಾರಿ ಜೆಡಿಎಸ್ ಅಧಿಕಾರ ಹಿಡಿಯುತ್ತದೆ ಎಂಬ ವಿಶ್ವಾಸವಿತ್ತು. ಜತೆಗೆ ಪಂಚಾಯಿತಿಯಲ್ಲಿ ಜೆಡಿಎಸ್ ಸದಸ್ಯರ ಸಂಖ್ಯೆ 5ರಿಂದ 7ಕ್ಕೇರಿತ್ತು. ಮುಂಇನ ದಿನಗಳಲ್ಲಿ ಪಂಚಾಯಿತಿಯಲ್ಲಿ ಜೆಡಿಎಸ್ ಅಧಿಕಾರಕ್ಕೇರಲಿದೆ ಎಂದು ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯ ಶ್ರೀಪತಿಹಳ್ಳಿ ಕೃಷ್ಣ ತಿಳಿಸಿದರು.
ಅಧ್ಯಕ್ಷರ ಚುನಾವಣೆ ವೇಳೆ ತಾಪಂ ಮಾಜಿ ಅಧ್ಯಕ್ಷ ನಾರಾಯಣಪ್ಪ, ಮಾಜಿ ಅಧ್ಯಕ್ಷ ಜಯಶಂಕರ್, ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಉಮಾ ಹೇಮಾರಾಜ್, ಅನಿತ, ಜಯಮ್ಮ, ರತ್ನಮ್ಮ ಸೇರಿ ಕಾಂಗ್ರೆಸ್ ಮುಖಂಡರು ಇದ್ದರು.