

ಮೈಸೂರು: ಮಾನವನ ಆಂತರ್ಯದಲ್ಲಿ ಅಡಗಿರುವ ಮೃಗೀಯ ವರ್ತನೆಗಳು ಕಡಿಮೆಯಾಗಬೇಕಾದರೇ ಕಲೆ-ಸಾಹಿತ್ಯದ ಸಂಗದಿಂದ ಮಾತ್ರ ಸಾಧ್ಯ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.
ವನ್ಯಮೃಗಗಳು ಕಾಡಿನಲ್ಲಿ ವಾಸವಾಗಿವೆ. ಅವುಗಳು ಅಲ್ಲಿ ಘರ್ಜಿಸಿಕೊಂಡು ಜೀವನ ಸಾಗಿಸುತ್ತಿವೆ. ಅದರಂತೆ ನಮ್ಮೊಳಗಿನ ಕಾಡಿನಲ್ಲೂ ಕೂಡಾ ವನ್ಯಮೃಗಗಳು ಇವೆ. ಅಂದರೆ ನಮ್ಮ ತಾಮಸ ಗುಣಗಳೇ ಮೃಗಗಳು. ಅವುಗಳು ತಮ್ಮ ಇರುವಿಕೆಯನ್ನು ತೋರ್ಪಡಿಸಲು ಆಗ್ಗಾಗ್ಗೆ ಘರ್ಜನೆ ಮಾಡುತ್ತಿರುತ್ತವೆ. ಈ ಘರ್ಜನೆಯನ್ನು ಹತ್ತಿಕ್ಕಲು ಸಾಹಿತ್ಯ, ಕಲೆಯ ಸಂಸರ್ಗದಲ್ಲಿ ಇರಬೇಕು. ಆಗ ಮಾತ್ರ ಅಲ್ಪಮಾನವ ಹೋಗಿ ವಿಶ್ವಮಾನವನಾಗುತ್ತಾನೆ ಎಂದರು.
ನಮ್ಮ ಬದುಕೇ ನಮಗೊಂದು ಸವಾಲು ಇದ್ದಂತೆ. ಇದರಲ್ಲಿ ಜಯಶೀಲರಾಗಲು ನಮಗೆ ಸಾಹಿತ್ಯದ ಸಾಂಗತ್ಯ ಅವಶ್ಯ. ಕಷ್ಟಕಾಲದಲ್ಲಿ ಸಮಸ್ಯೆಯನ್ನು ಎದುರಿಸಲು ಸಾಹಿತ್ಯವೇ ಬೆನ್ನಲುಬು. ಆದ್ದರಿಂದ ಸಾಹಿತ್ಯದೊಂದಿಗೆ ಲಾಲಿತ್ಯ ಹೊಂದಿದರೇ ಬದಕು ಚನ್ನಾಗಿರುತ್ತದೆ ಎಂದರು.