

ತರೀಕೆರೆ: ಪರಿಸರ ಸಂರಕ್ಷಣೆ, ಕೃಷಿ ಅಭಿವೃದ್ಧಿ, ಆರೋಗ್ಯ ಸಮೃದ್ಧಿ, ಧಾರ್ಮಿಕ ಸಹಿಷ್ಣುತೆ, ಸಾರ್ವಜನಿಕ ಮತ್ತು ಖಾಸಗಿಯಾಗಿ ಯಾವುದೇ ಕಾರ್ಯಕ್ರಮ ನಡೆದರೂ ಆಯೋಜಕರು ಜಾನಪದ ಕಲೆ, ಸಾಹಿತ್ಯ, ಸಂಗೀತಕ್ಕೆ ಸಹಕಾರ ನೀಡಬೇಕು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ತಿಳಿಸಿದರು. ಇಂದಿನ ಮಕ್ಕಳಿಗೆ ಜನಪದರ ಆಶಯದಂತೆ ದುಡಿಮೆ ಮತ್ತು ಬೆವರಿನ ಶ್ರಮದ ಅರಿವನ್ನು ಹಿರಿಯರಾದ ನಾವು ತಿಳಿಸಬೇಕು. ಗ್ರಾಮಸ್ಥರು ಆಸಕ್ತಿಯಿಂದ ಜಾನಪದ ಸಮ್ಮೇಳನ ಹಮ್ಮಿಕೊಂಡಿರುವುದು ಹೆಮ್ಮೆ ತಂದಿದೆ ಎಂದರು.
ಬೆಟ್ಟತಾವರಕೆರೆ ಗ್ರಾಮದ ಶ್ರೀಗೌರಮ್ಮ ದೇವಿ ಸಮುದಾಯ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ತೃತೀಯ ಜಾನಪದ ಸಮ್ಮೇಳನದಲ್ಲಿ ಮಾತನಾಡಿದರು.
ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಬಿ.ವಿ.ಜಯಣ್ಣ ಮಾತನಾಡಿ, ಚಿಕ್ಕಂದಿನಿಂದಲೂ ಜಾನಪದ ಕಲೆ, ಸಂಗೀತ, ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ನಂತರ ಶಾಲಾ, ಕಾಲೇಜಿನಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿ ಅಭಿನಯಿಸುವಷ್ಟರ ಮಟ್ಟಿಗೆ ಜಾನಪದ ನನ್ನ ಮೇಲೆ ಪ್ರಭಾವ ಬೀರಿತ್ತು. ಆ ಕಾರಣದಿಂದಲೇ ಜಾನಪದಕ್ಕೆ ಅಂದಿನಿಂದಲೂ ಅಪಾರ ಸಹಕಾರ ನೀಡುತ್ತ ಬರಲು ಸಾಧ್ಯವಾಯಿತು ಎಂದು ಹೇಳಿದರು. ಈ ಪರಿಣಾಮದಿಂದಲೇ ಸಮ್ಮೇಳನಾಧ್ಯಕ್ಷ ಸ್ಥಾನ ಲಭಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಉಳಿವಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.