ಯಾದಗಿರಿ: ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಶನಿವಾರ ಜಿಲ್ಲೆಯ ಯಕ್ತಾಪುರ ಗ್ರಾಮದ ಕಸ್ತೂರಬಾ ವಸತಿ ನಿಲಯದಲ್ಲಿ ನಡೆದಿದೆ.
ಶಿಕ್ಷಣ ಇಲಾಖೆಯ ಕಸ್ತೂರಬಾ ವಸತಿ ನಿಲಯದ 100 ವಿದ್ಯಾರ್ಥಿನಿಯರು ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಓದುತ್ತಿದ್ದು, ಬೆಳಗ್ಗೆ ನೀರು, ಬಿಸ್ಕಿಟ್ ಹಾಗೂ ಚಹಾ ಸೇವನೆ ಮಾಡಿ ಶಾಲೆಗೆ ಬಂದ ಐದಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಲೆಸುತ್ತು ಬಂದು ಬಿದ್ದಿದ್ದಾರೆ. ಮುಖ್ಯಗುರು ಮತ್ತು ವಸತಿ ನಿಲಯದ ಮೇಲ್ವಿಚಾರಕರು ಯಕ್ತಾಪುರ ಪ್ರಾಥಮಿಕ ಮತ್ತು ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಇದರಿಂದ ವಿದ್ಯಾರ್ಥಿನಿಯರು ಚೇತರಿಸಿಕೊಂಡು ವಸತಿ ನಿಲಯಕ್ಕೆ ತೆರಳಿದ್ದರೆ ಇನ್ನೂ ಕೆಲ ವಿದ್ಯಾರ್ಥಿನಿಯರು ಎರಡೂ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸುದ್ದಿ ತಿಳಿಯುತ್ತಲೆ ಯಕ್ತಾಪುರಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಸುಶೀಲಾ, ಜಿಲ್ಲಾ ಎಸ್ಪಿ ಸಂಗೀತಾ ಹಾಗೂ ಜಿಪಂ ಸಿಇಒ ಗರೀಮಾ ಪನ್ವಾರ್ ಅವರು ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯಯರಿಂದ ಮತ್ತು ನಿಲಯ ಮೇಲ್ವಿಚಾರಕರಿಂದ ಮಾಹಿತಿ ಪಡೆದು ಅಡುಗೆ ಕೋಣೆ, ನೀರು ಶೇಖರಣೆ ಸ್ಥಳ, ಶೌಚಗೃಹ ಸೇರಿ ಹಲವು ಸ್ಥಳಗಳನ್ನು ಪರಿಶೀಲಿಸಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.