ಕಲಿಕಾ ಸಮಯದಲ್ಲಿ ಮೊಬೈಲ್ ಬಳಕೆ ಅಪಾಯಕಾರಿ

sports
Published on

ಕಲಿಕಾ ಸಮಯದಲ್ಲಿ ಮೊಬೈಲ್ ಬಳಕೆ ಅಪಾಯಕಾರಿ. ಅದು ವಿದ್ಯಾರ್ಥಿಗಳ ಸಾಧನೆಯ ಹಾದಿಗೆ ತೊಡಕುಂಟು ಮಾಡುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿರಬೇಕು ಎಂದು ಹಾರೋಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಅಂಥೋನಿ ಬ್ಯಾಷ್ಟಿಸ್ಟ್ ಸಲಹೆ ನೀಡಿದರು.

ಮರಿಮಲ್ಲಪ್ಪನವರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪುಣ್ಯಸ್ಮರಣೆ, ಅಂತರ ಕಾಲೇಜು ಭಾವಗೀತೆ, ಕನ್ನಡ ಚರ್ಚಾ ಸ್ಪರ್ಧೆ, ಬಾಲಕರ ಖೋಖೋ, ಥ್ರೋಬಾಲ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಈ ಕಾಲಘಟ್ಟದಲ್ಲಿ ಮೊಬೈಲ್ ನಮ್ಮೊಂದಿಗೆ ಇದ್ದರೆ ಸಾಕು, ಬೇರೆ ಏನೂ ಬೇಡ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚು ಮೊಬೈಲ್ ಬಳಕೆಯಿಂದ ಮನಸ್ಸಿನ ಮೇಲೆ ಆಘಾತ ಉಂಟಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರ ಉಳಿದು ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಆಗ ಓದಿನಲ್ಲೂ ಉತ್ತಮ ಸಾಧನೆ ಮಾಡಬಹುದು ಎಂದರು.

ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವುದರಿಂದ ವಿದ್ಯಾರ್ಥಿಗಳ ಭವಿಷ್ಯವೂ ಉಜ್ವಲ ಆಗುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಯಲು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸಹಕಾರಿಯಾಗುತ್ತದೆ ಎಂದರು.

ಮೈಸೂರಿನ ಎಲ್ಲರೂ ಮರಿಮಲ್ಲಪ್ಪನವರ ವಿದ್ಯಾ ಸಂಸ್ಥೆಯನ್ನು ಸ್ಮರಿಸಬೇಕು. ಮೈಸೂರು ವಿಶ್ವವಿದ್ಯಾಲಯದ ಪ್ರತಿ ವರ್ಷದ ಖೋ ಖೋ ತಂಡದಲ್ಲೂ ಸಂಸ್ಥೆಯ ವಿದ್ಯಾರ್ಥಿಗಳು ಇರುತ್ತಿದ್ದರು. ಸಂಸ್ಥೆಯು ಓದಿನ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಶ್ಲಾಘಿಸಿದರು.

ಪ್ರಾಂಶುಪಾಲ ಡಾ.ಎಸ್.ಕೆ.ಅನಿಲ್, ರಾಜೀವನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಬಾಲಸುಬ್ರಮಣ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net