ಕರ್ನಾಟಕದಿಂದ ಆಂಧ್ರಗೆ ಉದ್ಯಮಗಳು ಹೋಗಲು ಕೇಂದ್ರ ಸರ್ಕಾರ ಕಾರಣ

mb patil
Published on

ಕರ್ನಾಟಕದಿಂದ ಆಂಧ್ರಗೆ ಉದ್ಯಮಗಳು ಹೋಗಲು ಕೇಂದ್ರ ಸರ್ಕಾರ ಕಾರಣ. ತಮಗೆ ಬೇಕಾದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಉದ್ಯಮಗಳನ್ನ ಕಳುಹಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ದೂರಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯಮಗಳ ಜೊತೆ ನಾವು ಮಾತುಕತೆ ಮಾಡಿರುತ್ತೇವೆ, ಎಲ್ಲವೂ ಅಂತಿಮವಾಗಿರುತ್ತದೆ. ದೆಹಲಿಗೆ ಹೋದ ಮೇಲೆ ಅವರು ಬದಲಾಗುತ್ತಾರೆ. ಗೂಗಲ್ ಕಂಪನಿ ಆಂಧ್ರಗೆ ಹೋಗಲು ಕೇಂದ್ರ ಸರ್ಕಾರವೇ ನೇರ ಕಾರಣ. ಚಂದ್ರಬಾಬು ನಾಯ್ಡುಗೆ ಕೇಂದ್ರ ಸರ್ಕಾರ ಕೊಟ್ಟ ಗಿಫ್ಟ್ ಅದು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಈ ರೀತಿಯಲ್ಲೂ ಅನ್ಯಾಯವಾಗುತ್ತಿದೆ ಎಂದರು.

ನಮ್ಮಲ್ಲಿ ಸೆಮಿಕಂಡಕ್ಟರ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ಪ್ರೋತ್ಸಾಹವಿದೆ. ನಮ್ಮ ಕೈಗಾರಿಕಾ ನೀತಿ ಉದ್ಯಮಸ್ನೇಹಿಯಾಗಿದೆ. ಆದರೆ ಕೇಂದ್ರ ಸರ್ಕಾರವು ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಕಂಪನಿಗಳನ್ನು ಬಿಜೆಪಿ ಆಡಳಿತವಿರುವ ಗುಜರಾತ್, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಕಳಿಸಿ ಕೊಡುತ್ತಿದೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ. ಹಿಂದೆ ಒಂದು ಕಂಪನಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ರಾಜ್ಯದಲ್ಲೇ ಹೂಡಿಕೆ ಮಾಡಲು ತೀರ್ಮಾನಿಸಿತ್ತು. ಆದರೆ, ದೆಹಲಿಗೆ ಹೋದಮೇಲೆ ಅವರು ಮನಸ್ಸು ಬದಲಿಸಿದರು. ಕೇಂದ್ರ ಸರಕಾರವು ಇಂತಹ ತಾರತಮ್ಯವನ್ನು ಬಿಡಬೇಕು ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಳೆದ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಯಿತು. ಇದರ ಮೂಲಕ 10.27 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರುವ ಖಾತ್ರಿ ಸಿಕ್ಕಿತು. ಈ ಪೈಕಿ ಶೇಕಡಾ 60ಕ್ಕಿಂತ ಹೆಚ್ಚು ಬಂಡವಾಳ ಈಗಾಗಲೇ ನಮ್ಮಲ್ಲಿ ಹೂಡಿಕೆ ಮಾಡಲ್ಪಟ್ಟಿದೆ. ನಾವು ಬರೀ ಮಾತನಾಡುವುದಿಲ್ಲ. ನುಡಿದಂತೆ ನಡೆಯುತ್ತಿದ್ದೇವೆ. ಈ ಹೂಡಿಕೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಗಳೂ ಸೃಷ್ಟಿಯಾಗುತ್ತಿವೆ ಎಂದು ವಿವರಿಸಿದ್ದಾರೆ.

ನಾನು ಕೈಗಾರಿಕಾ ಸಚಿವನಾದ ಮೇಲೆ ಹಲವು ದೇಶಗಳಿಗೆ ಭೇಟಿ ಕೊಟ್ಟು, ಹೂಡಿಕೆದಾರರನ್ನು ರಾಜ್ಯಕ್ಕೆ ಕರೆತರುತ್ತಿದ್ದೇನೆ. ಫಾಕ್ಸ್ ಕಾನ್ ತರಹದ ದೈತ್ಯ ಕಂಪನಿಯು ತೈವಾನ್ ನಂತರದ ತನ್ನ ಬೃಹತ್ ಘಟಕವನ್ನು ನಮ್ಮಲ್ಲಿ ಆರಂಭಿಸಿದೆ. ಇಲ್ಲಿಂದ ದುಬಾರಿ ಮೊಬೈಲ್ ಫೋನುಗಳು ರಫ್ತಾಗಿ ಹೋಗುತ್ತವೆ. ಜಪಾನ್ ತರಹದ ಸಂಪ್ರದಾಯವಾದಿ ದೇಶದಿಂದ ಕಳೆದ ಎರಡು ವರ್ಷಗಳಲ್ಲಿ ರಾಜ್ಯಕ್ಕೆ 10,500 ಕೋಟಿ ರೂ. ಬಂಡವಾಳ ಹೂಡಿಕೆಯ ಖಾತ್ರಿ ಸಿಕ್ಕಿದೆ. ಸಾಮಾನ್ಯವಾಗಿ ಅಲ್ಲಿ ಕುಟುಂಬ ಪರಿವಾರಗಳೇ ಕೈಗಾರಿಕೆ ನಡೆಸುವುದರಿಂದ, ನಿರ್ಧಾರ ತೆಗೆದುಕೊಳ್ಳುವುದು ನಿಧಾನವಾಗುತ್ತದೆ. ಆದರೂ ನಮ್ಮ ವಿಚಾರದಲ್ಲಿ ಎಲ್ಲವೂ ತ್ವರಿತ ಗತಿಯಲ್ಲಿ ಸಂಭವಿಸಿದೆ. ಒಸಾಕಾವಾ ಕಂಪನಿ ಕೂಡ ಹೂಡಿಕೆ ಮಾಡಲು ಬಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net