ಕರ್ನಾಟಕ- ತಮಿಳುನಾಡು ಗಡಿಯಲ್ಲಿ ಟ್ರಾಫಿಕ್

Published on

ಗುಂಡ್ಲುಪೇಟೆ: ಕರ್ನಾಟಕ- ತಮಿಳುನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ವಾಹನ ದಟ್ಟಣೆ ಉಂಟಾಗಿತ್ತು.

ತಾಲೂಕಿನ ಮೇಲುಕಾಮನಹಳ್ಳಿ ರಸ್ತೆಯಲ್ಲಿ ಬೆಳಗ್ಗಿನ ಜಾವ 3 ಗಂಟೆ ವೇಳೆಯಲ್ಲಿ ಬೆಂಗಳೂರಿನಿಂದ ಊಟಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ( ಐರಾವತ) ತಳಭಾಗಕ್ಕೆ ಕಬ್ಬಿಣದ ಪಟ್ಟಿ ತಗುಲಿ ಮುಂದೆ ಚಲಿಸಲು ಸಾಧ್ಯವಾಗದೆ ಸ್ಥಳದಲ್ಲೇ ನಿಂತು ಹೋಗಿತ್ತು.

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಮೇಲುಕಾಮನಹಳ್ಳಿ-ಕೆಕ್ಕನಹಳ್ಳ ಮಾರ್ಗದಲ್ಲಿ ವನ್ಯಜೀವಿಗಳ ಹಿತದೃಷ್ಟಿಯಿಂದ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಅನುಮತಿ ಇಲ್ಲ. ಈ ಅವಧಿಯಲ್ಲಿ ರಸ್ತೆಗೆ ಗೇಟ್ ಮುಚ್ಚಿ ಬಂದ್ ಮಾಡಲಾಗುತ್ತದೆ. ಆದರೆ ಅಂತರರಾಜ್ಯ ಓಡಾಟ ನಡೆಸುವ 3 ಕೆಎಸ್ಸಾರ್ಟಿಸಿ ಬಸ್ ಗಳಿಗೆ ಮಾತ್ರ ಸಂಚಾರಿಸಲು ವಿಶೇಷ ಅನುಮತಿ ಇದೆ. ಶುಕ್ರವಾರ ಬೆಳಗ್ಗಿನ ಜಾವ 3 ಗಂಟೆ ವೇಳೆಯಲ್ಲಿ ಊಟಿಗೆ ತೆರಳುತ್ತಿದ್ದ ಐರಾವತ ಬಸ್ ಗೆ ಗೇಟ್ ತೆರೆಯಲು ಮತ್ತು ಮುಚ್ಚಲು ಅಳವಡಿಸಿದ್ದ ಕಬ್ಬಿಣದ ಪಟ್ಟಿ ತಗುಲಿ ಮುಂದೆ ಸಾಗಲು ಸಾಧ್ಯವಾಗಿಲ್ಲ.

ಇದರಿಂದಾಗಿ ಬೆಳಗ್ಗೆ 6 ಗಂಟೆ ಬಳಿಕ ಬಂದ ಬೇರೆ ವಾಹನಗಳು ರಸ್ತೆಯಲ್ಲಿ ಮುಂದೆ ಸಾಗಲು ಸ್ಥಳಾವಕಾಶವಿಲ್ಲದೆ ಸುಮಾರು 2 ಕಿ.ಮೀ ಸಂಚಾರ ದಟ್ಟಣೆ ಉಂಟಾಯಿತು. ಬಂಡೀಪುರ ಸಫಾರಿ ವಾಹನಗಳಿಗೆ ಕಾಡಿನೊಳಗೆ ಪರ್ಯಾಯ ಮಾರ್ಗ ಕಲ್ಪಿಸಿಕೊಡಲಾಗಿತ್ತು.

ವಿಷಯ ತಿಳಿದು ಸ್ಥಳಕ್ಕೆ ಹೈವೆ ಪೆಟ್ರೋಲ್ ಪೊಲೀಸರು ಆಗಮಿಸಿದರು.ಕ್ರೇನ್ ಸಹಾಯದಿಂದ ಐರಾವತ ಬಸ್ ಮೇಲೆತ್ತಿ ಪೊಲೀಸ್ ಸಿಬ್ಬಂದಿ ಕಬ್ಬಿಣದ ಪಟ್ಟಿ ಬಿಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಾಡಿನ ರಸ್ತೆಯಲ್ಲಿ ಸಿಲುಕಿರುವ ಭಯದಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net