ಕರೊನೋತ್ತರ ಕಾಲದಲ್ಲಿ ಅಧಿಕಾರಿಗಳಿಂದ ಹೆಚ್ಚಿನ ನಿರೀಕ್ಷೆ

Published on
  • ಸಿಎಂ ಬಿಎಸ್ ವೈ ಕಿವಿಮಾತು
    ಬೆಂಗಳೂರು: ಕರೊನೋತ್ತರ ಕಾಲದಲ್ಲಿ ಅಧಿಕಾರಿಗಳಿಂದ ಸರ್ಕಾರ ಹೆಚ್ಚಿನದನ್ನು ನಿರೀಕ್ಷಿಸುತ್ತದೆ. ಜಿಲ್ಲಾ ಆಡಳಿತ ಕ್ರಿಯಾಶೀಲ, ಗ್ರಾಮಮುಖಿಯಾಗಿದ್ದರೆ ಸರ್ಕಾರದ ಆಶಯ ಈಡೇರಿಸುವುದು ಸುಲಭ ಸಾಧ್ಯವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿವಿಮಾತು ಹೇಳಿದರು.
    ವಿಧಾನ ಸೌಧ ಸಮ್ನೇಳನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜನರು ಕುಂದುಕೊರತೆಗಳ ಅಹವಾಲು ಹೊತ್ತು ಜಿಲ್ಲಾಧಿಕಾರಿ ಕಚೇರಿಗಳಿಗೆ ಎಡತಾಕುವುದು ಸಾಮಾನ್ಯ. ಈ ವೇಳೆ ಮಾನವೀಯ, ವಾಸ್ತವಿಕ ನೆಲೆಯಲ್ಲಿ ಅಧಿಕಾರಿಗಳು ಸ್ಪಂದಿಸಿದರೆ, ಯೋಜನೆ ಹಾಗೂ ಕಾರ್ಯಕ್ರಮಗಳ ಉದ್ದೇಶ ಈಡೇರುತ್ತದೆ. ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದರು.
    ತಾಕೀತು
    ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಗಾಗ್ಗೆ ಭೇಟಿ ನೀಡಿ, ಆಡಳಿತ ಯಂತ್ರ ಚುರುಕಾಗಿರುವಂತೆ ಎಚ್ಚರಿಕೆವಹಿಸಬೇಕು ಎಂದು ಸಿಎಂ ಬಿಎಸ್ ವೈ ಹೇಳಿದರು.
    ಅವಲೋಕನ ತಂತ್ರಾಂಶ ಬಿಡುಗಡೆ
    ಸರ್ಕಾರದ 39 ಇಲಾಖೆಗಳ 1800 ಯೋಜನೆಗಳಡಿ ಅನುಷ್ಠಾನ ಅಧಿಕಾರಿಗಳಿಗೆ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಹಾಗೂ ವೆಚ್ಚದ ವಿವರಗಳನ್ನು ಬೆರಳ ತುದಿಯಲ್ಲೇ ಒದಗಿಸುವ ' ಅವಲೋಕನ' ತಂತ್ರಾಂಶವನ್ನು ಸಂತೋಷದಿಂದ ಬಿಡುಗಡೆ ಮಾಡಿರುವೆ.
    ಇದರಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ,‌ಕಾರ್ಯತತ್ಪರತೆ ಹೆಚ್ಚಲಿದೆ. ಈ ತಂತ್ರಾಂಶವನ್ನು ಸಮರ್ಪಕವಾಗಿ ನಿರ್ವಹಿಸಿ ಉದ್ದೇಶ ಯಶಸ್ವಿಯಾಗಿಸಬೇಕು ಎಂದು ಸಿಎಂ ಬಿಎಸ್ ವೈ ಸಲಹೆ ನೀಡಿದರು.
    ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net