ಕರೊನಾ ಕಂಟ್ರೋಲ್ಗೆ ಹೈ ಅಲರ್ಟ್

COVID
Published on

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಕರೊನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹೈ ಅಲರ್ಟ್​ ಆಗಿದೆ.

ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್. ಅವರು ಜಿಲ್ಲಾ ಆರೋಗ್ಯಾಧಿಕಾರಿಗಳ ಸಭೆ ನಡೆಸಿ ಕರೊನಾ ಮತ್ತು ರೂಪಾಂತರಿ ಒಮಿಕ್ರಾನ್ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ. ಕರೊನಾ ಎರಡನೇ ಅಲೆಯಲ್ಲಿ ಆದ ಎಡವಟ್ಟುಗಳು ಮರುಕಳಿಸದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿರುವ ಜಿಲ್ಲಾಡಳಿತ ಹೊರ ರಾಜ್ಯದಿಂದ ಬರುವವರ ಮೇಲೆ ಹದ್ದಿನ ಕಣ್ಣಿರಿಸಿದೆ.

ಕಳೆದ ವರ್ಷ ಕರೊನಾ ವೇಳೆ ಆಸ್ಪತ್ರೆಯಲ್ಲಿ ಬೆಡ್ ಹಾಗೂ ವೆಂಟಿಲೇಟರ್ ಸಿಗದೆ ಸೋಂಕಿತರು ಒದ್ದಾಡಿ ಪ್ರಾಣ ಕಳೆದುಕೊಂಡ ಘಟನೆ ಜನಮಾನಸದಲ್ಲಿ ಉಳಿದಿದೆ. ಈ ರೀತಿ ಮತ್ತೊಮ್ಮೆ ನಡೆಯದಂತೆ ಆಕ್ಸಿಜನ್ ಘಟಕಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲಾಗಿದೆ. ಆಸ್ಪತ್ರೆಯ ಉಪಕರಣಗಳ ಕಾರ್ಯನಿರ್ವಹಣೆ ಬಗ್ಗೆ ಮೇಲಿಂದ ಮೇಲೆ ವರದಿ ತರಿಸಿಕೊಳ್ಳುತ್ತಿದೆ. ನಗರದ ಹೊರವಲಯದ ಕೋವಿಡ್ ಆಸ್ಪತ್ರೆಯಲ್ಲಿ 280 ಬೆಡ್ಗಳಿಗೆ ಆಕ್ಸಿಜನ್ ಅಳವಡಿಸಲಾಗಿದೆ. ತೆಲಂಗಾಣದ ಗಡಿಗೆ ಜಿಲ್ಲೆಗೆ ಅಂಟಿಕೊಂಡಿದ್ದರಿಂದ ಹೊರ ರಾಜ್ಯದಿಂದ ಪ್ರವೇಶಿಸಲು 48 ಗಂಟೆಯೊಳಗಿನ ಕರೊನಾ ಟೆಸ್ಟ್ ಮಾಡಿಸಿದ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯಗೊಳಿಸಿದೆ. ಜಿಲ್ಲಾದ್ಯಂತ 10 ಚೆಕ್ಪೋಸ್ಟ್ ಸ್ಥಾಪಿಸಿದ್ದು, ಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿಗೆ ನಿಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 320 ಆಕ್ಸಿಜನ್ ಬೆಡ್ ಲಭ್ಯವಿದ್ದು, ಇನ್ನುಳಿದಂತೆ 180 ಬೆಡ್ಗಳಿಗೆ ಪ್ರೋಮೆಟರ್ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆ ಹೊರಗಡೆ 1000 ಎಲ್ಪಿಎಂ (ಆಕ್ಸಿಜನ್) ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಇದರ ನಿರ್ವಹಣೆಗೆ 2 ತಂತ್ರಜ್ಞರನ್ನು ನಿಯೋಜಿಸಲಾಗಿದೆ. 177ಆಕ್ಸಿಜನ್ ಕಾನ್ಸನ್ಟ್ರೇಟರ್, ಎಬಿಜಿ ಮಷಿನ್ 2, 10 ಲೀಟರ್ ಆಕ್ಸಿಜನ್ ಸಾಮಥ್ರ್ಯದ 118 ಕಾನ್ಸನ್ಟ್ರೇಟರ್, ಬಿಪಾಪ್ 8, ಸಿಪಾಪ್ 4, ಸ್ರಿಂಗ್ಪಂಪ್ 19, ಜಂಬೋ ಸಿಲಿಂಡರ್ 155 ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕರೊನಾ ಸೋಂಕು ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗಿದ್ದು, ಪ್ರತ್ಯೇಕ ತಂಡಗಳನ್ನು ಸಹ ರಚಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.


ಮಾಸ್ಕ್ ಧರಿಸದಿದ್ದರೆ ದಂಡ: ಒಮಿಕ್ರಾನ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಾಸ್ಕ್ ಧರಿಸಿ ಸಂಚಾರ ಮಾಡುವುದು ಕಡ್ಡಾಯಗೊಳಿಸಿದೆ. ಮಾಸ್ಕ್ ಇಲ್ಲದೆ ಹೊರಗಡೆ ಬಂದರೆ ಪೊಲೀಸರು ಮುಲಾಜಿಲ್ಲದೆ ದಂಡ ವಿಧಿಸುತ್ತಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂತರ್ಿ ಸ್ವತಃ ಫೀಲ್ಡಿಗಿಳಿದಿದ್ದಾರೆ. ಸಾರ್ವಜನಿಕರು ಎಚ್ಚೆತ್ತುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net