ಕರೊನಾ ಕಂಟಕ ಬಹುಮುಖ; ಕಳ್ಳತನ, ಮಾನಸಿಕ ಅಸ್ವಸ್ಥತೆ, ಆತ್ಮಹತ್ಯೆ ಇನ್ನಿತರ ಸಮಸ್ಯೆ ಹೆಚ್ಚುವ ಆತಂಕ

front-1
Published on

ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಇಡೀ ವಿಶ್ವವನ್ನೇ ನಲುಗಿಸಿರುವ ಕರೊನಾ ಸೋಂಕು, ಆರ್ಥಿಕತೆ ಹಾಗೂ ಆರೋಗ್ಯ ಕ್ಷೇತ್ರದ ಮೇಲೆ ಬೀರಿರುವ ಪರಿಣಾಮಕ್ಕಿಂತ ಹೆಚ್ಚಾಗಿ ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸಿರುವುದು ಆತಂಕವನ್ನುಂಟು ಮಾಡಿದೆ. ಕೈಗಾರಿಕೆಗಳು ಹಾಗೂ ಉದ್ಯಮದ ಮೇಲೆ ಬಿದ್ದ ಬರೆ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವುದು ಒಂದೆಡೆಯಾದರೆ, ಹಳ್ಳಿ ಮತ್ತು ನಗರ ಪ್ರದೇಶಗಳನ್ನು ಕಾಡುತ್ತಿರುವ ಹಲವು ಬಗೆಯ ಸಮಸ್ಯೆಗಳಿಂದ ಸಮಾಜವೇ ಕಂಗಾಲಾಗುವಂತಾಗಿದೆ. ಜತೆಗೆ ಸರ್ಕಾರದ ಮೇಲೆ ಜವಾಬ್ದಾರಿಯೂ ಹೆಚ್ಚಾಗುತ್ತಿದೆ.

ರಾಜ್ಯದಲ್ಲಿ ಕರೊನಾ ಕಾಣಿಸಿಕೊಂಡು ಆರು ತಿಂಗಳಾಗುತ್ತಿದೆ. ಈ ಅವಧಿಯಲ್ಲಿ ಸೂಕ್ಷ್ಮ ಹಾಗೂ ಸಮಗ್ರ ಆರ್ಥಿಕ ವ್ಯವಸ್ಥೆಯ ಮೇಲೆ ಬಿದ್ದಿರುವ ಹೊಡೆತ, ನಿರುದ್ಯೋಗ ಹೆಚ್ಚಳ, ಕುಸಿದ ಜಿಡಿಪಿ ಜತೆಗೆ ಇನ್ನಷ್ಟು ಸವಾಲಿನ ಪಟ್ಟಿಯೇ ಮುಂದಿದೆ.

ಎಲ್ಲೆಲ್ಲಿ ಸಮಸ್ಯೆ?: ಸಮಸ್ಯೆಗಳು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ನಗರಗಳಿಂದ ಹಳ್ಳಿಗಳ ಕಡೆಗೆ ಆದ ಮರುವಲಸೆ ಹೊಸ ತಿಕ್ಕಾಟಗಳಿಗೆ ಎಡೆ ಮಾಡಿಕೊಟ್ಟಿದೆ. ಆದಾಯ ಇಲ್ಲ, ಉಳಿತಾಯ ಇಲ್ಲ, ಆಸ್ತಿಯೂ ಇಲ್ಲ ಎಂಬುದು ಬಹುತೇಕರ ಸ್ಥಿತಿಯಾಗಿದೆ. ಇರಲು ಮನೆ, ದುಡಿಯುವ ಕೈಗೆ ಕೆಲಸ, ಕೃಷಿಗೆ ಭೂಮಿ, ಪಡಿತರಕ್ಕೆ ರೇಷನ್ ಕಾರ್ಡ್ ಹೀಗೆ ಪ್ರತಿಯೊಂದಕ್ಕೂ ಪರದಾಡುವ ಸ್ಥಿತಿ ಮರುವಲಸಿಗರಿಗೆ ಕಾಡಲಾರಂಭಿಸಿದೆ.

ಅದೇ ರೀತಿ ನಗರ ಪ್ರದೇಶದಲ್ಲಿ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಸಣ್ಣ ಪುಟ್ಟ ವ್ಯಾಪಾರಗಳು ಬಾಗಿಲು ಮುಚ್ಚಿವೆ. ಹೋಟೆಲ್​ಗಳು ತೆರೆದರೂ ಉದ್ಯೋಗಿಗಳ ಸಂಖ್ಯೆ ಕಡಿತವಾಗಿವೆ. ನಿರ್ಮಾಣ ಕ್ಷೇತ್ರ ಇನ್ನೂ ಚೇತರಿಸಿಕೊಂಡಿಲ್ಲ. ಯಾವುದೇ ಸಾಂಕ್ರಾಮಿಕ ರೋಗ ಜಾಸ್ತಿಯಾಗುತ್ತ ಹೋದಂತೆ ಅದು ಸೃಷ್ಟಿಸುವ ಸಮಸ್ಯೆಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಈಗಿನ ಪರಿಸ್ಥಿತಿಯೂ ಅದೇ ಆಗಿದೆ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವಂತಾಗಿದೆ. ದುಬಾರಿ ವಸ್ತುಗಳ ಖರೀದಿ ನಿಂತಿದೆ. ಆಹಾರ, ನೀರು, ಔಷಧದಂತಹ ಮೂಲ ವಸ್ತುಗಳಿಗೆ ಪರದಾಡುವ ಸ್ಥಿತಿಯನ್ನು ಕರೊನಾ ನಿರ್ಮಾಣ ಮಾಡಿದೆ.

ಎಲ್ಲೆಲ್ಲಿ ಪರಿಣಾಮ?

  • ಮನೆಗೆಲಸದವರನ್ನು ಬಹುತೇಕ ಕಡೆಗಳಲ್ಲಿ ಸೇರಿಸುತ್ತಿಲ್ಲ. ಒಂದು ಮಾಹಿತಿ ಪ್ರಕಾರ, ಬೆಂಗಳೂರು ನಗರವೊಂದರಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮನೆಗೆಲಸದವರು ಉದ್ಯೋಗ ಕಳೆದುಕೊಂಡಿದ್ದಾರೆ.
  • ಆಟೋಗಳನ್ನು ನಂಬಿ ಬದುಕುತ್ತಿದ್ದವರು ಈಗ ಕೆಲಸ ಇಲ್ಲದಂತಾಗಿದ್ದಾರೆ. ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಆಟೋಗಳಿವೆ. ಅದರಲ್ಲೂ ನಗರ ಪ್ರದೇಶದಲ್ಲಿ ಬಸ್ ನಿಲ್ದಾಣಗಳನ್ನೇ ಆಟೋಗಳು ಅವಲಂಬಿಸಿರುತ್ತವೆ. ಈಗ ಜನರ ಓಡಾಟವೇ ಕಡಿಮೆಯಾಗಿದೆ.
  • ಶಾಲೆಗಳನ್ನು ಅವಲಂಬಿಸಿರುವ ಆಟೋ ಮತ್ತು ವ್ಯಾನ್​ಗಳ ಸಂಖ್ಯೆ ಲಕ್ಷಾಂತರ ಇದೆ. ಶಾಲೆಗಳು ಆರಂಭವಾಗುವ ತನಕ ಇವರ ಹೊಟ್ಟೆಗೆ ತಣ್ಣೀರುಬಟ್ಟೆಯೇ ಗತಿ ಎಂಬಂತಾಗಿದೆ.
  • ರಾಜ್ಯದಲ್ಲಿ ಸಾವಿರಾರು ಕಲ್ಯಾಣ ಮಂಟಪಗಳಿವೆ. ಒಂದೊಂದು ಕಲ್ಯಾಣ ಮಂಟಪದಲ್ಲಿ ಕನಿಷ್ಠ 10 ಜನ ಕೆಲಸ ಮಾಡುತ್ತಾರೆ. ಅವರಿಗೆ ಈಗ ಕೆಲಸ ಇಲ್ಲ. ಅಡುಗೆ ಮಾಡುವವರು, ಡೆಕೋರೇಷನ್ ಮಾಡುವವರು, ಛಾಯಾಗ್ರಾಹಕರು ಹೀಗೆ ಅವಲಂಬಿತ ಉದ್ಯೋಗಸ್ಥರ ಸಂಖ್ಯೆ ಲಕ್ಷಾಂತರ ಇದೆ. ಅವರಿಗೂ ಕೆಲಸ ಇಲ್ಲದಂತಾಗಿದೆ.
  • ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಸಂಬಳವಿಲ್ಲದೇ ಪರದಾಡುವಂತಾಗಿದೆ.
  • ಮನೆಗಳು ಖಾಲಿಯಾಗಿರುವುದರಿಂದ ಹೊಸ ಬಾಡಿಗೆದಾರರು ಬರುವ ತನಕ ಬ್ಯಾಂಕ್ ಇಎಂಐಗೆ ಹಣ ಹೊಂದಿಸುವುದು ಮಾಲೀಕರಿಗೆ ಸವಾಲಾಗಿದೆ.
  • ಕೆಲಸ ಕಳೆದುಕೊಂಡು ಮರು ವಲಸೆ ಹೋಗದವರು ಜೀವನಕ್ಕೆ ಕೆಲಸ ಹುಡುಕಿಕೊಳ್ಳಬೇಕಿದೆ
  • ಲೈಂಗಿಕ ಕಾರ್ಯಕರ್ತೆಯರು, ತೃತೀಯ ಲಿಂಗಿಗಳ ಬದುಕು ದುಸ್ತರ, ಚಾಲಕರು, ಅಡುಗೆಯವರು ಕೆಲಸವಿಲ್ಲದೇ ಪರದಾಟ

ಕರೊನಾ ನಂತರದ ಬದುಕು ಬಹಳ ಕಷ್ಟ. ಆದ್ದರಿಂದ ಈಗಿನಿಂದಲೇ ಎಚ್ಚರಿಕೆ ವಹಿಸಬೇಕಾಗಿದೆ. ಆರ್ಥಿಕ ದುಸ್ಥಿತಿ ಜನರ ಜೀವನ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸರ್ಕಾರ ಎಲ್ಲ ವರ್ಗದವರ ಆರ್ಥಿಕ ಚಟುವಟಿಕೆ ಬೆಳೆಯುವಂತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. | ಡಾ. ಕೃಷ್ಣರಾಜು ಅರ್ಥಶಾಸ್ತ್ರಜ್ಞರು ಗ್ರಾಮಗಳ ಸಬಲೀಕರಣದಿಂದ ದೇಶ ಸದೃಢವಾಗುತ್ತದೆ ಎಂಬ ತತ್ವಕ್ಕೆ ಈಗ ಆದ್ಯತೆ ನೀಡಬೇಕಾಗಿದೆ. ಕರೊನೋತ್ತರ ಕಾಲಕ್ಕೆ ಗ್ರಾಮಗಳಲ್ಲಿ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಬೇಕಾಗಿದೆ. ರೈತರಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಡಬೇಕಾಗಿದೆ. ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕು. ಸ್ಥಳೀಯಾಡಳಿತವನ್ನು ಇನ್ನಷ್ಟು ಗಟ್ಟಿ ಮಾಡಬೇಕು. | ಪ್ರೊ. ಐ. ಮಾರುತಿ ಪ್ರಾಧ್ಯಾಪಕರು, ಐಸೆಕ್ https://www.vijayavani.net/corona-cases-r-value-has-fallen-below-1-in-delhi/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net