ಕರಾಳ ದಿನ ಆಚರಣೆಗೆ ಆಕ್ಷೇಪ : ರಾಜ್ಯ ಸರ್ಕಾರ, ಎಂಇಎಸ್‌ಗೆ ಹೈಕೋರ್ಟ್ ನೋಟಿಸ್

highcourt
Published on

ಬೆಂಗಳೂರು:  ಕನ್ನಡ ರಾಜ್ಯೋತ್ಸವ ವಿರೋಧಿಸಿ ಬೆಳಗಾವಿಯಲ್ಲಿ ನ.1ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಮ್ಮಿಕೊಂಡಿರುವ ಕಾನೂನುಬಾಹಿರ ಕರಾಳ ದಿನ ಆಚರಣೆಗೆ ಮಧ್ಯಂತರ ಪ್ರತಿಬಂಧಕಾದೇಶ ನೀಡುವಂತೆ ಕೋರಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಎಂಇಎಸ್‌ಗೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಮಲ್ಲಪ್ಪ ಚಾಯಪ್ಪ ಅಕ್ಷರದ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಕೆ.ರಾಜೇಶ್ ರೈ ಅವರ ವಿಭಾಗೀಯ ಪೀಠ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲ ಎನ್. ಪಿ ಅಮೃತೇಶ್ ವಾದ ಮಂಡಿಸಿ ಸರ್ಕಾರದ ಅನುಮತಿಸಿದ್ದರೂ ಎಂಇಎಸ್ 2019ರಿಂದ ಎಂಇಎಸ್ ಉಗ್ರ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಗನ್ ಕೊಂಡೊಯ್ಯಲಾಗಿದೆ. ಇವರ ನಡೆಸುವ ಉದ್ಧಟತನವು ಎಗ್ಗಿಲ್ಲದೇ ಸಾಗಿ ಬಂದಿದೆ. ಇಂಥವರ ವಿರುದ್ಧ ಪೊಲೀಸರು ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಿ ಬಳಿಕ ಸುಮ್ಮನಾಗಿ ಬಿಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಹೈಕೋರ್ಟ್‌ನ ಸಮನ್ವಯ ಪೀಠವು ಕನ್ನಡ ರಾಜ್ಯೋತ್ಸವನ್ನು ಆತಂಕವಿಲ್ಲದೆ ನಡೆಸಲು ಸರ್ಕಾರ ಮತ್ತು ಪೊಲೀಸರು ಕ್ರಮಕೈಗೊಳ್ಳಬೇಕು. ಕಾನೂನುಬಾಹಿರವಾಗಿ ನಡೆದುಕೊಳ್ಳುವವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಹೇಳಿದೆ. ಈ ಆದೇಶದ ಅನ್ವಯ ಮುಚ್ಚಳಿಕೆ ನೀಡಲು ಸಿದ್ಧವಿದ್ದೇವೆ. ಈ ಬಗ್ಗೆ ಪಿಐಎಲ್ ಸಲ್ಲಿಸುವ ಸನ್ನಿವೇಶವೇಯಿಲ್ಲ. ಕೇವಲ ಪ್ರಚಾರ ಬಯಸಿ ಅರ್ಜಿ ಸಲ್ಲಿಸಲಾಗಿದೆ ಅದನ್ನು ವಜಾ ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಅಮೃತೇಶ್ ಅವರು ಸರ್ಕಾರದ ಎಚ್ಚರಿಕೆಗೆ ಎಂಇಎಸ್ ಕಾರ್ಯಕರ್ತರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಕಳೆದ ಮೂರು ನಾಲ್ಕು ವರ್ಷಗಳಿಂದ ದುರ್ವರ್ತನೆ ತೋರುತ್ತಿದ್ದಾರೆ. ಮಾರಕಾಸ್ತ್ರಗಳನ್ನು ಪ್ರತಿಭಟನೆಗೆ ಕೊಂಡೊಯ್ಯಲಾಗುತ್ತಿದೆ. ಎಂಇಎಸ್ ಅಧ್ಯಕ್ಷ ಮನೋಜ್ ಕಿಣೇಕರ್ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವದ ಬಳಿಕ ಮಾಧ್ಯಮಗಳ ವರದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಅರ್ಜಿಯನ್ನು ಬಾಕಿ ಉಳಿಸಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಕೋರಿದರು.

ಇದನ್ನು ಪರಿಗಣಿಸಿದ ಪೀಠವು ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಹಾಗೂ ಎಂಇಎಸ್‌ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ನ. 5ಕ್ಕೆ ಮುಂದೂಡಿತು. ಅಂತಿಮವಾಗಿ ಪೀಠವು ಸಂವಿಧಾನ ಮತ್ತು ಮಾನವ ಹಕ್ಕುಗಳನ್ನು ಒಪ್ಪಿಕೊಂಡ ಬಳಿಕ ಎಲ್ಲರೂ ಅದಕ್ಕೆ ಬದ್ಧವಾಗಿರಬೇಕು ಎಂದು ಪೀಠವು ಮೌಖಿಕವಾಗಿ ಹೇಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net