ಕರಡಿ ದಾಳಿ ಇಬ್ಬರಿಗೆ ಗಂಭೀರ ಗಾಯ

VINAY karadi attack
ಮೂಡಿಗೆರೆ ತಾಲೂಕಿನ ಕುಂಬರಡಿ ಗ್ರಾಮದ ಕಾಫಿ ತೋಟದಲ್ಲಿ ಕರಡಿ ದಾಳಿಯಿಂದ ಗಾಯಗೊಂಡಿರುವ ವಿನಯ್ ಗೌಡ ಮತ್ತು ಗಿಡ್ಡಯ್ಯ.
Published on

ಮೂಡಿಗೆರೆ: ಗೋಣಿಬೀಡು ಹೋಬಳಿ ಊರುಬಗೆ ಗ್ರಾಪಂ ವ್ಯಾಪ್ತಿಯ ಕುಂಬರಡಿ ಗ್ರಾಮದ ಕಾಫಿ ತೋಟದಲ್ಲಿ ಬುಧವಾರ ಬೆಳಗ್ಗೆ ಕರಡಿ ದಾಳಿಯಿಂದ ಇಬ್ಬರಿಗೆ ಗಂಭೀರ ಗಾಯವಾಗಿದೆ.

ಬುಧವಾರ ಬೆಳಗ್ಗೆ 10ಕ್ಕೆ ತೋಟದಲ್ಲಿ ಗಿಡಕ್ಕೆ ಗೊಬ್ಬರ ಹಾಕುತ್ತಿದ್ದ ಕೃಷಿಕ ವಿನಯ್ ಗೌಡ ಹಾಗೂ ಕಾರ್ಮಿಕ ಗಿಡ್ಡಯ್ಯ ಎಂಬುವವರ ಮೇಲೆ ಕರಡಿ ದಾಳಿ ನಡೆಸಿದ್ದು ಇದರಿಂದ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ.

ಕರಡಿ ಮರಿಯೊಂದಿಗೆ ತೋಟದಲ್ಲಿ ಬೀಡುಬಿಟ್ಟಿತ್ತು. ಇಬ್ಬರನ್ನು ನೋಡಿದ ಕರಡಿ ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಆಗ ಕರಡಿಯೊಂದಿಗೆ ಸೆಣಸಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮುಖ, ಕೈ, ಕಾಲುಗಳಿಗೆ ಕರಡಿ ಪರಚಿದೆ. ಇದರಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕರಡಿಗಳು, ಕಾಡಾನೆ ಮತ್ತು ಕಾಡುಕೋಣಗಳ ಹಾವಳಿ ತೀವ್ರವಾಗಿದೆ. ರೈತರು ಜಮೀನಿನ ಕೆಲಸ ಮಾಡಲು ಭಯಪಡುತ್ತಿದ್ದಾರೆ. ವರ್ಷದ ಹಿಂದೆ ಇದೇ ಗ್ರಾಮದಲ್ಲಿ ಕೃಷಿಕ ಕೆ.ಎಲ್.ಚಂದ್ರೇಗೌಡ ಮತ್ತು ಅವರ ಪುತ್ರ ಆದರ್ಶ ಮೇಲೆ ಕರಡಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿತ್ತು. ಈಗ ಮತ್ತೊಮ್ಮೆ ಕರಡಿ ಇಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಮತ್ತಿತರ ಕಾಡು ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net