

ತಿ.ನರಸೀಪುರ: ಕಬ್ಬು ದರ ಮರುಪರಿಶೀಲನೆಗೆ ಅ.15 ರಂದು ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದಿರುವ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ರೈತರ ಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಮೀಟರ್ ಅಳವಡಿಸುವ ಯತ್ನ ಸರ್ಕಾರ ಮಾಡುತ್ತಿದೆ. ರೈತರು ಜಾಗೃತರಾಗಿರಬೇಕು.
ಕಬ್ಬು ಸಕ್ಕರೆ ಕಾರ್ಖಾನೆಗಳ ಪಾಲಿಗೆ ಕಲ್ಪವೃಕ್ಷವಾಗಿದೆ. ಆದರೆ ರೈತರ ಪಾಲಿಗೆ ಸಾಲದ ವೃಕ್ಷವಾಗಿದೆ. ಕಬ್ಬಿನ ಎಲ್ಲ ಉತ್ಪನ್ನಗಳಿಂದಲೂ ಮೌಲ್ಯವರ್ಧನೆಯ ವಸ್ತುಗಳು ತಯಾರಾಗುತ್ತಿವೆ. ಕಬ್ಬು ಬೆಳೆಯಿಂದ ರಾಜ್ಯದಲ್ಲಿ 40,000 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಆದರೆ ರೈತನಿಗೆ ನ್ಯಾಯಸಮ್ಮತ ಮೌಲ್ಯ ಆಧರಿತ ಬೆಲೆ ಸಿಗುತ್ತಿಲ್ಲ. ಎಂಎಲ್‌ಎ, ಎಂಪಿಗಳು ಇದರ ಪಾಲುದಾರರಾಗಿದ್ದಾರೆ. ಆದ್ದರಿಂದಲೇ ಯಾರೂ ಮಾತನಾಡುತ್ತಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬಣ್ಣಾರಿ ಕಾರ್ಖಾನೆಯವರು ಕಬ್ಬು ಕಟಾವು ವಿಳಂಬ ಮಾಡುತ್ತಿದ್ದು, ಕಡಿಮೆ ಇಳುವರಿ ತೋರಿಸಿ ರೈತರನ್ನು ವಂಚಿಸುತ್ತಿದ್ದಾರೆ. ಉಪ ಉತ್ಪನ್ನಗಳ ಲಾಭವನ್ನು ಸಹ ಎರಡು ವರ್ಷಗಳಿಂದ ನೀಡುತ್ತಿಲ್ಲ. ಜಿಲ್ಲಾಧಿಕಾರಿಗಳು ಕಾರ್ಖಾನೆ ಆಡಳಿತ ಮಂಡಳಿ, ರೈತ ಮುಖಂಡರ ಸಭೆ ಕರೆದು ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಅ.18 ಮತ್ತು 19ರಂದು ಎರಡು ದಿನಗಳು ಬೆಳಗಾವಿಯ ಬೈಲಹೊಂಗಲ ತಾಲೂಕು ಸೋಗಲ್ ಕ್ಷೇತ್ರದಲ್ಲಿ ರಾಜ್ಯ, ಜಿಲ್ಲಾ, ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕುರುಬೂರು ಸಿದ್ದೇಶ್, ಕಿರಗಸೂರು ಪ್ರಸಾದ ನಾಯಕ, ರೈತ ಮುಖಂಡ ಕಿರಗಸೂರು ಶಂಕರ್ ಹಾಡ್ಯ ರವಿ , ಕುರುಬೂರು ಮಂಜು, ಅಪ್ಪಣ್ಣ, ತರಕಾರಿ ಲಿಂಗರಾಜ್, ಯೋಗೇಶ್, ರಾಜೇಶ್, ರಾಜಶೇಖರ್ ಕುಮಾರ್, ರೂಪೇಶ್ ಹಾಜರಿದ್ದರು.