

ಸಾಲಿಗ್ರಾಮ: ಮಂಡ್ಯದಲ್ಲಿ ರೈತ ಧರಣಿಯನ್ನು ಹತ್ತಿಕ್ಕಿದ್ದನ್ನು ಖಂಡಿಸಿ ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಮಾತನಾಡಿ, ರೈತ ಸಂಘಗಳನ್ನು ಛಿದ್ರ ಮಾಡಲು ಹೊರಟರೆ ಸರ್ಕಾರಗಳು ಉಳಿಯುವುದಿಲ್ಲ. ಮಂಡ್ಯದಲ್ಲಿ ರೈತರ ಧರಣಿಯನ್ನು ರಾಜ್ಯ ಸರ್ಕಾರ ಪೊಲೀಸರ ಮೂಲಕ ಮೊಟಕುಗೊಳಿಸಿದ್ದು ಸರಿಯಲ್ಲ. ರೈತ ಹೋರಾಟಕ್ಕೆ ಮತ್ತೊಮ್ಮೆ ಎಲ್ಲಾದರೂ ಅಡಚಣೆ ಮಾಡಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಹಾಲು, ಕಬ್ಬಿಗೆ ಉತ್ತಮ ಬೆಲೆ ನಿಗದಿತ ಮಾಡಬೇಕು. ಚಳಿಗಾಲದ ಅಧಿವೇಶನದಲ್ಲಿ ರೈತರ ಬೇಡಿಕೆ ಬಗ್ಗೆ ಯಾವ ಶಾಸಕರು ಧ್ವನಿ ಎತ್ತಲಿಲ್ಲ. ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಎಚ್ಚರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಎಸ್.ಬಿ.ಶೇಖರ್, ಪ್ರಧಾನ ಕಾರ್ಯದರ್ಶಿ ರವಿ, ಕಾರ್ಯದರ್ಶಿ ರವಿ, ರೈತ ಮುಖಂಡರಾದ ರುದ್ರೇಶ್, ಶಿವಣ್ಣ ಇತರರಿದ್ದರು.