ಕಬ್ಬಿನ ಗದ್ದೆಯಲ್ಲಿ ಕಾಡಾನೆಗಳ ದಾಂಧಲೆ

IMG-20221005-WA0005
ಎಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆಗಳು ಕಬ್ಬು ತುಳಿದು ನಾಶಪಡಿಸಿರುವುದು.
Published on

ಹಂಪಾಪುರ: ಎಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ಹೊಮ್ಮರಗಳ್ಳಿ ಗ್ರಾಮಕ್ಕೆ ಹೆಡಿಯಾಲ ಭಾಗದ ಕಾಡಿನಿಂದ ಬಂದ ಮೂರು ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ದಾಂಧಲೆ ನಡೆಸಿವೆ.

ಭಾನುವಾರ ಸಂಜೆ ಕಬ್ಬಿನ ಗದ್ದೆಗೆ ಸೇರಿಕೊಂಡ ಕಾಡಾನೆಗಳು, ಸೋಮವಾರ ರೈತರ ಕಣ್ಣಿಗೆ ಬಿದ್ದಿವೆ. ಇಲ್ಲಿನ ಶಾರದಮ್ಮ ಎಂಬುವರಿಗೆ ಸೇರಿದ ಜಮೀನಿಗೆ ನುಗ್ಗಿ ಕಬ್ಬನ್ನು ನಾಶಪಡಿಸಿವೆ.

ಜಮೀನಿನಲ್ಲಿ ಚಿರತೆಯೊಂದು ಮರಿ ಹಾಕಿದ್ದು, ಜಮೀನು ಮಾಲೀಕರು ಹಾಗೂ ರೈತರು ಕೃಷಿ ಕಾರ್ಯಕ್ಕಾಗಿ ಓಡಾಡುವುದೇ ಕಷ್ಟವಾಗಿದೆ ಎಂದು ಶಾರದಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನು ಇದೇ ಗ್ರಾಮದ ಮಂಜುಳಾ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿರುವ ಕಬ್ಬಿನ ಗದ್ದೆಗೆ ನುಗ್ಗಿರುವ ಆನೆಗಳು ಕಬ್ಬು ನಾಶ ಮಾಡಿವೆ. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟಿದ್ದಾರೆ.

ಈ ಭಾಗದಲ್ಲಿ ಕಾಡಿನಿಂದ ನಾಡಿಗೆ ಬರುವ ಆನೆಗಳು ನಿತ್ಯ ಜಮೀನುಗಳಿಗೆ ನುಗ್ಗಿ ರೈತರ ಫಸಲು ಹಾಳು ಮಾಡುತ್ತಿವೆ. ಆನೆಗಳು ಹಾಗೂ ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬರದಂತೆ ತಡೆಯುವಲ್ಲಿ ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ. ಕೂಡಲೇ ಬೆಳೆನಷ್ಟವಾದ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಸದಸ್ಯ ಎಚ್.ಬಿ. ರಾಜೇಶ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net