ಕನ್ಹಯ್ಯಲಾಲ್​ ಹತ್ಯೆಗೈದವರನ್ನು ಗಲ್ಲಿಗೇರಿಸಲು ಪಟ್ಟು: ಕೋಲಾರದ ಹಿಂಜಾವೇ ಕಾರ್ಯಕರ್ತರ ಪ್ರತಿಭಟನೆ, ವಿರೋಧ ಪಕ್ಷಗಳಿಗೆ ಸಂಸದ ಮುನಿಸ್ವಾಮಿ ತರಾಟೆ

01-kolara-1 bajarangadala
ಕೋಲಾರದ ಬಂಗಾರಪೇಟೆ ವೃತ್ತದಲ್ಲಿ ಕನ್ಹಯ್ಯಲಾಲ್​ ಹತ್ಯೆ ಖಂಡಿಸಿ ಹಿಂದುಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಂಸದ ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​ ಇತರರು ಇದ್ದರು.
Published on

ಕೋಲಾರ: ಕನ್ಹಯ್ಯಲಾಲ್​ ಹತ್ಯೆ ಖಂಡಿಸಿ ನಗರದ ಬಂಗಾರಪೇಟೆ ವೃತ್ತದಲ್ಲಿ ಹಿಂದುಪರ ಸಂಘಟನೆಗಳು ಶುಕ್ರವಾರ ರಸ್ತೆ ತಡೆದು ಪ್ರತಿಭಟಿಸಿದವು.
ಬಿಜೆಪಿ, ಬಜರಂಗದಳ, ಹಿಂದು ಜಾಗರಣ ವೇದಿಕೆ ಮತ್ತಿತರ ಸಂಘಟನೆಗಳ ಕಾರ್ಯಕರ್ತರು 1 ಗಂಟೆ ಧರಣಿ ನಡೆಸಿದರು. ಹಿಂದುಪರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಹಿಂದುಗಳ ಹತ್ಯೆಗಳನ್ನು ಇನ್ನು ಮುಂದೆ ಸಹಿಸಲಾಗದು. ದುಷ್ಕರ್ಮಿಗಳನ್ನು ನೇಣಿಗೇರಿಸಬೇಕು. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ರಾಕ್ಷಸರನ್ನು ಮಟ್ಟ ಹಾಕಲು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.


ಸಂಸದ ಮುನಿಸ್ವಾಮಿ ಮಾತನಾಡಿ, ಮುಸ್ಲಿಮರಿಗೆ ಏನಾದರೂ ತೊಂದರೆಯಾದಾಗ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್​, ಜೆಡಿಎಸ್​, ಹಿಂದುಗಳು ಮುಸ್ಲಿಮರಿಂದ ಹತ್ಯೆಯಾದಾಗ ತುಟಿಬಿಚ್ಚುವುದಿಲ್ಲ. ಕನ್ಹಯ್ಯಲಾಲ್​ ಅಮಾಯಕ, ಸಾಮಾನ್ಯ ಪ್ರಜೆ. ಆತನ ಮಗ ಸಾಮಾಜಿಕ ಜಾಲತಾಣದಲ್ಲಿ ಯಾವುದೋ ಪೋಸ್ಟ್​ ಹಾಕಿದ ಎಂದು ಆತನ ಶಿರ ಕಡಿಯುವ ಅಗತ್ಯ ಇರಲಿಲ್ಲ. ಇವೆರಡೂ ಪಕ್ಷಗಳಿಗೆ ಜನರ ಪರ ಗೌರವವಿದ್ದರೆ, ಘಟನೆಯನ್ನು ಖಂಡಿಸಿ ಬೀದಿಗಿಳಿದು ಹೋರಾಟ ಮಾಡಲಿ. ಅದು ಬಿಟ್ಟು ಜಾತ್ಯತಿತ, ಸರ್ವಧರ್ಮ ಸಮನ್ವಯ ಕಾಪಾಡಬೇಕು ಎಂದು ಹೇಳಲು ಇವರಿಗೆ ನೈತಿಕತೆಯಿಲ್ಲ ಎಂದರು.


ವಿರೋಧ ಪಕ್ಷದವರು ಹಿಂದುಗಳಾಗಿದ್ದರೆ ಕನ್ನಯ್ಯಲಾಲ್​ ಕೊಲೆ ಖಂಡಿಸಲಿ. ಮತಕ್ಕಾಗಿ ಯಾರನ್ನೋ ಓಲೈಸುವುದನ್ನು ಇನ್ನಾದರೂ ಬಿಡಬೇಕು ಎಂದರು.


ನಾವು ಪ್ರಗತಿಪರರು ಸಮಭಾವದಿಂದ ಎಲ್ಲರನ್ನೂ ನೋಡಬೇಕು ಎನ್ನುವ ಕೆಲವು ಸಾಹಿತಿಗಳ ಕಣ್ಣಿಗೆ ಕನ್ಹಯ್ಯಲಾಲ್​ ಹತ್ಯೆ ಕಾಣುವುದಿಲ್ಲ. ದೇಶದ ಕಾನೂನಿಗೆ ಡೋಂಗಿ ಸಾಹಿತಿಗಳು ಗೌರವ ಕೊಡುವಂತಿದ್ದರೆೆ ಸಮಾಜಘಾತುಕ ಕೆಲಸ ಮಾಡುವವರ ವಿರುದ್ಧ ಧ್ವನಿಯೆತ್ತಲಿ. ಇಂತಹ ಸಂಚು ರೂಪಿಸುವವರನ್ನು ನಾವೆಲ್ಲ ಎಚ್ಚೆತ್ತುಕೊಂಡು ಮೊದಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಉರಿಬಿಸಿಲಲ್ಲಿ ಈ ರೀತಿ ನಾವು ಪ್ರತಿಭಟನೆ ಮಾಡುವುದಲ್ಲ, ದೇಶದ್ರೋಹಿಗಳು ನಮ್ಮಿಂದ ಇಲ್ಲಿರಲು ಸಾಧ್ಯವಾಗುತ್ತಿಲ್ಲ ಎಂದು ಬೊಬ್ಬೆಹಾಕುವಂತೆ ಅವರನ್ನು ಸಾರ್ವಜನಿಕರೇ ಶಿಕ್ಷಿಸಬೇಕಿದೆ ಎಂದರು.


ಹಿಂದು ಜಾಗರಣ ವೇದಿಕೆ ಮುಖಂಡ ಕೇಶವಮೂರ್ತಿ ಮಾತನಾಡಿ, ಮತಿಗೇಡಿಗಳು ಅನಗತ್ಯವಾಗಿ ದೇಶಾದ್ಯಂತ ದೊಂಬಿ ಎಬ್ಬಿಸಿದರು. ಐಸಿಸ್​ನವರು ಬ್ರಿಟನ್​, ಕೆನಡಾದಲ್ಲಿ ದಾಳಿಗಳನ್ನು ಮಾಡುತ್ತಾರೆ. ಆದರೆ ದೇಶದ ತಂಟೆಗೆ ಬರಲು ಹೆದರುತ್ತಾರೆ. ದೇಶದ ಎಲ್ಲ ಕಾನೂನುಗಳ ಬಗ್ಗೆ ಮಾತನಾಡುವ ಒಬ್ಬ ಮುಸಲ್ಮಾನನೂ ಸಹ ಕನ್ನಯ್ಯ ಹತ್ಯೆ ಬಗ್ಗೆ ಧ್ವನಿಯೆತ್ತಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್​, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಂಕರ್​ ನಾಯಕ್​, ಕುಡಾ ಅಧ್ಯಕ್ಷ ವಿಜಯಕುಮಾರ್​, ಮುಖಂಡರಾದ ಕೆ.ಚಂದ್ರಾರೆಡ್ಡಿ, ಗಿರೀಶ್​, ಬೆಗ್ಲಿ ಸೂರ್ಯಪ್ರಕಾಶ್​, ಓಂಶಕ್ತಿ ಚಲಪತಿ, ಆರ್​.ಪ್ರಭಾಕರ್​, ತಿಮ್ಮರಾಯಪ್ಪ, ಡಾ.ಶಿವಣ್ಣ, ಮಾಗೇರಿ ನಾರಾಯಣಸ್ವಾಮಿ, ಹನುಮಂತಪ್ಪ, ಕೋಳಿ ನಾಗರಾಜ್​ ಮತ್ತಿತರರಿದ್ದರು.

ಪ್ರಧಾನಿ ಮೋದಿ ಅವರಿಗೆ ಎಚ್ಚರಿಕೆ ಕೊಡುವುದು ಮತ್ತು ದೇಶದಲ್ಲಿ ಕೋಮು ಗಲಭೆಗಳನ್ನು ಸೃಷ್ಠಿಸುವ ಹುನ್ನಾರ ಕನ್ನಯ್ಯಲಾಲ್​ ಹತ್ಯೆ ಹಿಂದಿದೆ. ಆರೋಪಿಗಳನ್ನು ವಿವಿಐಪಿಗಳಂತೆ ನಡೆಸಿಕೊಂಡು ಜನರ ತೆರಿಗೆ ಹಣದಲ್ಲಿ ಅವರನ್ನು ಸಾಕದೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು.

ಎಸ್​.ಮುನಿಸ್ವಾಮಿ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net